ADVERTISEMENT

'ಕುಂಟ' ಪದ ಬಳಕೆಗೆ ಈಶ್ವರಪ್ಪ ಬಹಿರಂಗ ಕ್ಷಮೆ ಕೇಳಲಿ: ಚಂದ್ರಶೇಖರ ಪುಟ್ಟಪ್ಪ

ಅಂಗವಿಕಲ ಸಮುದಾಯಕ್ಕೆ ಅವಹೇಳನ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 16:48 IST
Last Updated 22 ಅಕ್ಟೋಬರ್ 2021, 16:48 IST
ಕೆ.ಎಸ್‌. ಈಶ್ವರಪ್ಪ
ಕೆ.ಎಸ್‌. ಈಶ್ವರಪ್ಪ   

ಬೆಂಗಳೂರು: ‘ಮೇಲೇಳಲೂ ಸಾಧ್ಯವಿಲ್ಲದ ಕುಂಟನೊಬ್ಬ ಪೈಲ್ವಾನನಿಗೆ ಜಾಡಿಸಿ ಒದೆಯುತ್ತೇನೆ ಎಂದು ಹೇಳುವ ಹಾಗೆ ರಾಜ್ಯದಲ್ಲಿ ಜೆಡಿಎಸ್‌ ಪರಿಸ್ಥಿತಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಇತ್ತೀಚಿಗೆ ವ್ಯಂಗ್ಯವಾಡಿದ್ದಾರೆ. ಮಾತಿನ ಭರದಲ್ಲಿ ‘ಕುಂಟ’ ಎಂಬ ಪದ ಬಳಸುವ ಮೂಲಕ ಅವರು ಅಂಗವಿಕಲ ಸಮುದಾಯವನ್ನು ಅವಹೇಳನ ಮಾಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ಅಂಗವಿಕಲರ ರಕ್ಷಣಾ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ಪುಟ್ಟಪ್ಪ ದೂರಿದ್ದಾರೆ.

‘2016ರ ಅಂಗವಿಕಲರ ಹಕ್ಕುಗಳ ಕಾಯ್ದೆ ಪ್ರಕಾರ ‘ಕುಂಟ’ ಎಂಬ ಪದ ಬಳಸಿ ನಿಂದಿಸುವುದು ಶಿಕ್ಷಾರ್ಹ ಅಪರಾಧ. ಆ ಕುರಿತ ಅರಿವು ಸಚಿವರಿಗೆ ಇದ್ದಂತಿಲ್ಲ. ಇಂತಹ ಜನಪ್ರತಿನಿಧಿಗಳು ಸಮಾಜಕ್ಕೆ ಮಾದರಿಯಾಗುವುದಾದರೂ ಹೇಗೆ. ಇವರಿಂದ ನಾಗರಿಕರು ಏನನ್ನು ಕಲಿಯಲು ಸಾಧ್ಯ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಇತ್ತೀಚೆಗೆ ಮುಗಿದ ಪ್ಯಾರಾಲಿಂಪಿಕ್ಸ್‌ನಲ್ಲಿ ಅಂಗವಿಕಲ ಕ್ರೀಡಾಪಟುಗಳು 19 ಪದಕಗಳನ್ನು ಜಯಿಸಿ ದೇಶದ ಹಿರಿಮೆ ಹೆಚ್ಚಿಸಿದ್ದಾರೆ. ಅವರ ಸಾಮರ್ಥ್ಯವನ್ನು ಅರಿಯದ ಈಶ್ವರಪ್ಪನವರು ಬಾಯಿಗೆ ಬಂದಂತೆ ಮಾತನಾಡುವುದು ಅವರ ಘನತೆಗೆ ತಕ್ಕುದಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಈಶ್ವರಪ್ಪನವರು ಕೂಡಲೇ ಅಂಗವಿಕಲ ಸಮುದಾಯದ ಕ್ಷಮೆ ಕೇಳಬೇಕು. ಮುಂದೆ ಎಂದಿಗೂ ಇಂತಹ ಪದ ಬಳಕೆ ಮಾಡಬಾರದು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.