ADVERTISEMENT

ಐಟಿಐ ಪಠ್ಯಕ್ರಮ ಬದಲಾವಣೆಗೆ ತಜ್ಞರ ಸಮಿತಿ: ಡಾ.ಸಿ.ಎನ್. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 20:48 IST
Last Updated 14 ಡಿಸೆಂಬರ್ 2020, 20:48 IST
ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ    

ಬೆಂಗಳೂರು: ‘ಐಟಿಐ ಕೋರ್ಸ್‌ಗಳ ಪಠ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಬದಲಿಸಲು ಶಿಕ್ಷಣ ತಜ್ಞರು ಮತ್ತು ಉದ್ಯಮದ ಪ್ರತಿನಿಧಿಗಳ ಸಮಿತಿ ರಚಿಸಲಾಗುವುದು’ ಎಂದು ಕೌಶಲಾಭಿವೃದ್ಧಿ ಇಲಾಖೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಇಲಾಖೆಯ ಪ್ರಗತಿ ಪರಿಶೀಲನೆ‌ಯ ಬಳಿಕ ಮಾತನಾಡಿದ ಅವರು, ‘ಐಟಿಐನಲ್ಲಿ ಕಲಿಯುವ ಬಹುತೇಕ‌ ಕೋರ್ಸ್‌ಗಳಿಗೆ ಬೇಡಿಕೆ ಇಲ್ಲ. ಹೀಗಾಗಿ, ಐಟಿಐ ಮಾಡಿದವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಕೋರ್ಸ್‌ಗಳನ್ನು ಆರಂಭಿಸಬೇಕಾಗಿದೆ’ ಎಂದರು.

‘ಈಗಿರುವ ಒಟ್ಟು 53ರಲ್ಲಿ 43 ಕೋರ್ಸ್‌ಗಳಿಗೆ ಕಳೆದ ವರ್ಷ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಅನುಪಯುಕ್ತ ಕೋರ್ಸುಗಳನ್ನು ರದ್ದು ಮಾಡಿ ಉದ್ಯೋಗಾದಾರಿತ ಕೋರ್ಸ್ ಗಳನ್ನು ಆರಂಭಿಸಲಾಗುವುದು’ ಎಂದೂ ಅವರು ಹೇಳಿದರು.

ADVERTISEMENT

ಕೌಶಲಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್, ಉದ್ಯೋಗ ಮತ್ತು ತರಬೇತಿ ಆಯುಕ್ತ ಕೆ.ವಿ.ತ್ರಿಲೋಕ ಚಂದ್ರ, ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ ಸಭೆಯಲ್ಲಿದ್ದರು.

‘2 ಸಾವಿರ ಇಎಸ್‌ಡಿಎಂ ನವೋದ್ಯಮ: ಗುರಿ’
ಬೆಂಗಳೂರು:
‘ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇಎಸ್‌ಡಿಎಂ) ವಲಯದಲ್ಲಿ 2022ರ ವೇಳೆಗೆ 2 ಸಾವಿರ ನವೋದ್ಯಮಗಳ ಸ್ಥಾಪನೆ ಹಾಗೂ 2025ರ ವೇಳೆಗೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ’ ಎಂದು ಎಲೆಕ್ಟ್ರಾನಿಕ್ಸ್ ಹಾಗೂ ಐಟಿ, ಬಿಟಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು.

ಇಎಸ್‌ಡಿಎಂ ವಲಯದಲ್ಲಿ ನಾವೀನ್ಯತೆ ಉತ್ತೇಜಿಸುವ ಉದ್ದೇಶದಿಂದ ಭಾರತೀಯ ವಿದ್ಯುನ್ಮಾನ ಅರೆವಾಹಕ ಸಂಸ್ಥೆ (ಐಇಎಸ್ಎ) ನೀಡುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವರ್ಚುವಲ್ ಆಗಿ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

‘ಭಾರತದ ಇಎಸ್‌ಡಿಎಂ ರಫ್ತಿನಲ್ಲಿ ಕರ್ನಾಟಕದ ಕೊಡುಗೆ ಶೇ 64. ಜೊತೆಗೆ ಕರ್ನಾಟಕವು ದೇಶದ ಅತ್ಯಂತ ದೊಡ್ಡ ಚಿಪ್ ವಿನ್ಯಾಸ ವಲಯವಾಗಿದ್ದು, ಶೇ 70ರಷ್ಟು ಚಿಪ್ ವಿನ್ಯಾಸಕರು ರಾಜ್ಯದಲ್ಲಿ ಉದ್ಯಮನಿರತರಾಗಿದ್ದಾರೆ’ ಎಂದರು.

ವಿವಿಧ ವಿಭಾಗಗಳಲ್ಲಿ ವಿಜೇತರು: 1. ನವೋದ್ಯಮಗಳು: ಪಥ್ ಶೋಧ್, ಹ್ಯಾಕ್ ಲ್ಯಾಬ್ಸ್, ದೇವಿಕ್ ಅರ್ಥ್, ಆಕ್ಸೆಲರಾನ್ ಲ್ಯಾಬ್ಸ್, ಇವಿಕ್ಯುಪಾಯಿಂಟ್, ಆಲ್ಫಾಐಸಿ, 2. ನವೋದ್ಯಮ ಪರಿಪೋಷಕ: ಸೈನ್, ಐಐಟಿ ಮುಂಬೈ. 3. ಸೂಕ್ಷ್ಮ, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳು (ಎಂ.ಎಸ್.ಎಂ.ಇ): ಸಾಂಖ್ಯ ಲ್ಯಾಬ್ಸ್, ಸ್ಕ್ಯಾನ್ ರೇ, ಐವೇವ್, ಸಹಸ್ರ. 4. ಉದ್ದಿಮೆ: ಎಎಂಡಿ, ಬಿಇಎಲ್, ಐಇನ್ಫೋಚಿಪ್ಸ್, ವಿಸ್ಟ್ರಾನ್. 5. ತಂತ್ರಜ್ಞಾನ ದೂರದರ್ಶಿತ್ವ: ನಿವೃತಿ ರಾಯ್, ಪ್ರೊ. ರಾಮಗೋಪಾಲ್ ರಾವ್, ಪ್ರೊ.ಎ.ಪಾಲ್ ರಾಜ್, ಅರುಣಾ ಸುಂದರರಾಜನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.