ADVERTISEMENT

ಅನುಕಂಪದ ಆಧಾರದಲ್ಲಿ ಹುದ್ದೆ: ನಿಯಮ ಬದಲಿಸಿ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 18:27 IST
Last Updated 22 ಮಾರ್ಚ್ 2021, 18:27 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಮರಣ ಹೊಂದಿದವರ ಕುಟುಂಬದವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಕೊಡಲು ನಿಯಮ ಬದಲು ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರಿಗೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

ಬಿಜೆಪಿಯ ಅರುಣ ಶಹಾಪುರ ಅವರ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ, ‘ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕರ್ತವ್ಯದಲ್ಲಿರುವಾಗ ಮರಣ ಹೊಂದಿದ ನೌಕರನ ಅವಲಂಬಿತರಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ‘ ಎಂದರು.

‘ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ 2001ರ ಮಾರ್ಚ್‌ 1 ನಂತರ ತೆರವಾಗುವ ಬೋಧಕೇತರ ಹುದ್ದೆಗಳು ಶಾಶ್ವತವಾಗಿ ಅನುದಾನರಹಿತವೆಂದು ಪರಿಗಣಿಸಲಾಗುತ್ತಿದೆ. ಹೀಗಾಗಿ, ಅನುಕಂಪ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ನಿಯಮದಲ್ಲಿ ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಆಗ ಶಹಾಪುರ ಅವರ ಪರವಾಗಿ ಮಾತನಾಡಿದ ಹೊರಟ್ಟಿ, ‘ಇತರ ಎಲ್ಲ ಇಲಾಖೆಗಳಲ್ಲಿ ಅನುಕಂಪದ ಆಧಾರದಲ್ಲಿ ಹುದ್ದೆ ಭರ್ತಿ ಮಾಡಲು ಅವಕಾಶ ಇರುವಾಗ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಏಕಿಲ್ಲ. ಈ ಬಗ್ಗೆ ನಿಯಮ ಬದಲಿಸಲು ಕ್ರಮ ತೆಗೆದುಕೊಳ್ಳಿ’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.