ADVERTISEMENT

ಡಕಾಯಿತಿ:11 ‘ಉಗ್ರ’ರ ವಿರುದ್ಧ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2021, 20:33 IST
Last Updated 17 ಫೆಬ್ರುವರಿ 2021, 20:33 IST
ಎನ್‌ಐಎ
ಎನ್‌ಐಎ   

ಬೆಂಗಳೂರು: ಡಕಾಯಿತಿ ಪ್ರಕರಣದಲ್ಲಿ ಜಮಾತ್‌–ಉಲ್–ಮುಜಾಹಿದ್ದೀನ್‌ ಬಾಂಗ್ಲಾದೇಶ್ (ಜೆಎಂಬಿ) ಉಗ್ರ ಸಂಘಟನೆಯ 11 ಸದಸ್ಯರ ವಿರುದ್ಧರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಜೆಎಂಬಿ ಸದಸ್ಯರಾದ ನಜೀರ್ ಶೇಖ್, ಆರೀಫ್ ಹುಸೇನ್, ಆಸಿಫ್ ಇಕ್ಬಾಲ್, ಜಹಿದುಲ್ ಇಸ್ಲಾಂ, ಕಡೋರ್‌ಖಾಝಿ, ಹಬಿಬೂರ್ ರೆಹಮಾನ್, ದಿಲ್ವರ್ ಹುಸೇನ್, ಮುಸ್ತಾಫಿಜಾರ್ ರೆಹಮಾನ್, ಆದಿಲ್ ಶೇಖ್, ಅಬ್ದುಲ್ ಕರೀಂ ಹಾಗೂ ಮೊಸರಫ್ ಹುಸೇನ್ ಎಂಬುವರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ.

2018ರಲ್ಲಿ ಜೆಎಂಬಿ ಸಂಘಟನೆಯ ಉಗ್ರರ ಅಗತ್ಯಗಳನ್ನು ಪೂರೈಸಲು ‘ಮಾಲ್ ಎ ಗನಿಮತ್’ ಹೆಸರಿನಲ್ಲಿ ಹಣ ಸಂಗ್ರಹಕ್ಕೆ ಯತ್ನಿಸಿದ್ದರು. ವಿಧ್ವಂಸಕ ಕೃತ್ಯವೆಸಗಲು ಶಸ್ತ್ರಾಸ್ತ್ರ, ಸ್ಫೋಟಕಗಳ ವಸ್ತುಗಳ ಸಂಗ್ರಹಕ್ಕೆ ಮುಂದಾಗಿದ್ದರು. ಇದಕ್ಕಾಗಿ 2020ರ ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಬೆಂಗಳೂರಿನ ನಾಲ್ಕು ಸ್ಥಳಗಳಲ್ಲಿ ಡಕಾಯಿತಿ ನಡೆದಿತ್ತು. ಈ ಸಂಬಂಧ ಅತ್ತಿಬೆಲೆ ಠಾಣೆಯಲ್ಲಿ ಎರಡು, ಕೊತ್ತನೂರು ಹಾಗೂ ಕೆ.ಆರ್.ಪುರ ಠಾಣೆಗಳಲ್ಲಿ ತಲಾ ಒಂದು ಎಫ್‌ಐಆರ್ ದಾಖಲಾಗಿತ್ತು.

ADVERTISEMENT

‘ಪ್ರಮುಖ ಆರೋಪಿಯಾಗಿರುವ ಜಹಿದುಲ್ ಇಸ್ಲಾಂ, ಭಾರತದಲ್ಲಿಜೆಎಂಬಿ ಚಟುವಟಿಕೆಗಳ ಪ್ರಚಾರದಲ್ಲಿ ಮುಖ್ಯ ಪಾತ್ರವಹಿಸಿದ್ದ. ಬಾಂಗ್ಲಾದೇಶದ ಸರಣಿ ಬಾಂಬ್ ಸ್ಫೋಟ ಸೇರಿದಂತೆ ವಿವಿಧ ಸ್ಫೋಟ ಕೃತ್ಯಗಳಲ್ಲಿ ಪ್ರಮುಖ ಆರೋಪಿಯೂ ಆಗಿದ್ದಾನೆ. ಅಡಗು ತಾಣಗಳು, ಆಶ್ರಯ ಪಡೆದಿದ್ದ ಸ್ಥಳಗಳು ಹಾಗೂ ಡಕಾಯಿತಿ ಕುರಿತಾದ ಮಾಹಿತಿಗಳನ್ನು ವಿಚಾರಣೆ ವೇಳೆ ತನಿಖಾಧಿಕಾರಿಗಳ ಮುಂದೆ ಹೇಳಿದ್ದು, ತನಿಖೆ ನಡೆಯುತ್ತಿದೆ’ ಎಂದು ಎನ್‌ಐಎ ತಿಳಿಸಿದೆ.

ಬೆಂಗಳೂರಿನಲ್ಲೂಜೆಎಂಬಿ ಅಡಗುತಾಣಗಳನ್ನು ಸ್ಥಾಪನೆ ಮಾಡಿತ್ತು. ಈ ಮೂಲಕ ದಕ್ಷಿಣ ಭಾರತದಲ್ಲಿ ತನ್ನ ಕಾರ್ಯವನ್ನು ವಿಸ್ತರಣೆ ಮಾಡಿಕೊಳ್ಳುವ ಉದ್ದೇಶ ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.