ADVERTISEMENT

ಮುಜಾರಿಬಾ ವಂಚನೆ ಮಾಹಿತಿ ಕೇಳಿದ ಸಿಐಡಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 18:37 IST
Last Updated 18 ಜನವರಿ 2021, 18:37 IST

ಬೆಂಗಳೂರು: ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಜನರಿಂದ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪದಡಿ ‘ಮುಜಾರಿಬಾ ಬುಲಿಯನ್ ಟ್ರೇಡಿಂಗ್ ಸಲ್ಯೂಷನ್’ ಕಂಪನಿ ವಿರುದ್ಧ ಸಿಐಡಿ ಪೊಲೀಸರು ತನಿಖೆ ಆರಂಭಿಸಿದ್ದು, ಗ್ರಾಹಕರ ಹೇಳಿಕೆ ಪಡೆಯಲು ಮುಂದಾಗಿದ್ದಾರೆ.

‘ಫ್ರೇಜರ್‌ಟೌನ್ ಕೋಲ್ಸ್ ರಸ್ತೆಯಲ್ಲಿ ಕಚೇರಿ ತೆರೆದಿದ್ದ ಕಂಪನಿ, ಶೇ 60ರಿಂದ ಶೇ 70ರಷ್ಟು ಲಾಭಾಂಶದ ಆಮಿಷವೊಡ್ಡಿ ಜನರಿಂದ ಹಣ ಸಂಗ್ರಹಿಸಿತ್ತು. ಕೆಲ ದಿನ ಬಡ್ಡಿ ನೀಡಿದಂತೆ ಮಾಡಿದ್ದಕಂಪನಿ, ನಂತರ ಬಂದ್ ಮಾಡಿತ್ತು. ಕಂಪನಿಯಲ್ಲಿ ಹಣ ಹೂಡಿದ್ದ ಮಹಮ್ಮದ್ ಜಮೀಲ್ ಎಂಬುವರು ಮೊದಲಿಗೆ ದೂರು ನೀಡಿದ್ದರು. ನಂತರ ಪುಲಿಕೇಶಿನಗರ ಹಾಗೂ ಜೆ.ಸಿ.ನಗರ ಠಾಣೆಗಳಲ್ಲೂ ಎಫ್‌ಐಆರ್‌ಗಳು ದಾಖಲಾಗಿದ್ದವು’ ಎಂದು ಸಿಐಡಿ ಅಧಿಕಾರಿಯೊಬ್ಬರು ಹೇಳಿದರು.

‘ಕಂಪನಿ ಆಡಳಿತ ಮಂಡಳಿಯಲ್ಲಿದ್ದ ಮೊಹಮ್ಮದ್ ರಿಯಾಜ್, ಅಹಮ್ಮದ್ ಫೈಜಾನ್, ಮೊಹಮ್ಮದ್ ಮುದಾಸಿರ್‌ ಪಾಷಾ, ಸೈಯದ್ ತಬ್ರೇಜ್ ಹಾಗೂ ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಪ್ರಕರಣದ ತನಿಖೆಯನ್ನು 2020ರಲ್ಲಿ ಸಿಐಡಿಗೆ ವಹಿಸಲಾಗಿದ್ದು, ಪೊಲೀಸರ ಪ್ರತ್ಯೇಕ ತಂಡ ತನಿಖೆ ಆರಂಭಿಸಿದೆ’ ಎಂದೂ ತಿಳಿಸಿದರು.

ADVERTISEMENT

‘ವಂಚನೆಗೊಳಗಾದ ಗ್ರಾಹಕರ ಪಟ್ಟಿ ಮಾಡಲಾಗುತ್ತಿದೆ. ಕಂಪನಿಯಲ್ಲಿ ಹೂಡಿಕೆ ಮಾಡಿರುವವರು ದಾಖಲೆಗಳ ಸಮೇತ ಸಿಐಡಿ ಕಚೇರಿಗೆ ಬಂದು ಹೇಳಿಕೆ ನೀಡಬೇಕು. ಅವುಗಳನ್ನು ಪರಿಶೀಲಿಸಲಾಗುವುದು’ ಎಂದೂ ಅಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.