ADVERTISEMENT

ಪರಿಹಾರ ಬೇಡ, ಮಗು ಬೇಕು: ಚಿರತೆಗೆ ಸಿಕ್ಕ ಮಗುವಿನ ಅಜ್ಜ ದಾಸೇಗೌಡ ನೋವು

ನಿಲ್ಲದ ಕುಟುಂಬಸ್ಥರ ಕಣ್ಣೀರು, ಚಂದನಾ ಇಲ್ಲದ ಮನೆಯಲ್ಲಿ ನೀರವ ಮೌನ

ಅನಿಲ್ ಕುಮಾರ್ ಜಿ
Published 2 ಮಾರ್ಚ್ 2020, 4:59 IST
Last Updated 2 ಮಾರ್ಚ್ 2020, 4:59 IST
ಚಿರತೆ ಹೆಣ್ಣು ಮಗು ಚಂದನಾಳನ್ನು ಹೊತ್ತೊಯ್ದಾಗ ಕಣ್ಣಾರೆ ಕಂಡ ದಾಸೇಗೌಡ
ಚಿರತೆ ಹೆಣ್ಣು ಮಗು ಚಂದನಾಳನ್ನು ಹೊತ್ತೊಯ್ದಾಗ ಕಣ್ಣಾರೆ ಕಂಡ ದಾಸೇಗೌಡ   

ತುಮಕೂರು: ಆ ಮಗು ಇತ್ತೀಚೆಗಷ್ಟೇ ಮಾತನಾಡುವುದು, ನಡೆದಾಡುವುದು ಕಲಿತಿತ್ತು. ಮಗುವಿನ ತೊದಲು ಮಾತು, ತುಂಟಾಟ ಎಲ್ಲರನ್ನು ಮಂತ್ರಮುಗ್ಧವಾಗಿಸುತ್ತಿತ್ತು. ಆ ಮಗು ಎಂದರೆ ಕುಟುಂಬಸ್ಥರಿಗೆ ಎಲ್ಲಿಲ್ಲದ ಪ್ರೀತಿ. ಆದರೆ, ಆ ನಗು ಕೊನೆಯವರೆಗೂ ಉಳಿಯಲೇ ಇಲ್ಲ.

ತಾಲ್ಲೂಕಿನ ಹೆಬ್ಬೂರು ಹೋಬಳಿ ಬೈಚೇನಹಳ್ಳಿಯ ಶ್ರೀನಿವಾಸ್ ಮತ್ತು ಶಿಲ್ಪಾ ದಂಪತಿ ಪುತ್ರಿ ಚಂದನಾ ಆ ಮನೆಯಲ್ಲಿ ಸಂತಸವನ್ನು ಅರಳಿಸಿದ್ದಳು. ತಾತ ಅಜ್ಜಿಯ ಮುದ್ದು ಮೊಮ್ಮಗಳು ಆಕೆ. ಮಗುವಿನ ಬೆಳವಣಿಗೆಯನ್ನು ಕಣ್ತುಂಬಿಕೊಳ್ಳುತ್ತಲೇ ತಮ್ಮ ಕಷ್ಟಗಳನ್ನು ಮರೆಯುತ್ತಿದ್ದರು.

ಶನಿವಾರ ಸಂಜೆ ಮನೆಯ ಅಂಗಳದಲ್ಲಿ ಚಂದನಾ ತನ್ನ ಅಕ್ಕ ತುಷಾರ ಜತೆ ಆಟವಾಡುತ್ತಿದ್ದಳು. ತಾತ ದಾಸೇಗೌಡ ಪಕ್ಕದಲ್ಲಿಯೇ ಟಿಲ್ಲರ್ ಸರಿಪಡಿಸುತ್ತಿದ್ದರು. ಮನೆಯ ಹಿಂಬದಿಯಲ್ಲಿ ಹೊಂಚು ಹಾಕುತ್ತಿದ್ದ ಚಿರತೆ ಚಂಗನೆ ಹಾರಿ ಚಂದನಾಳನ್ನು ಹಿಡಿದು, ಆಕೆಯ ತಾತನ ಎದುರೇ ಕೊಂಡೊಯ್ದಿತು.

ADVERTISEMENT

ತನ್ನ ಕಣ್ಣೆದುರಿಗೆ ಮೊಮ್ಮಗಳನ್ನು ಎಳೆದುಕೊಂಡು ಹೋಗುತ್ತಿದ್ದರೂ ದಾಸೇಗೌಡ ಏನು ಮಾಡಲಾಗದೇ ಅಸಹಾಯಕರಾದರು. ದಾಸೇಗೌಡರ ಕಿರುಚಾಟ ಕೇಳಿದ ಮನೆಯವರು, ಅಕ್ಕಪಕ್ಕದವರು ಬರುವಷ್ಟರಲ್ಲಿ ಚಿರತೆ ಕಣ್ಮರೆ ಆಯಿತು. ಅರ್ಧ ಕಿ.ಮೀ ದೂರದಲ್ಲಿ ಮಗು ಶವವಾಗಿ ಬಿದ್ದಿದ್ದಳು.

ವಯಸ್ಸಾದವರಿಗೆ ಆಸರೆ: ಇತ್ತೀಚೆಗೆ ಚಂದನಾ ತಂದೆ ಶ್ರೀನಿವಾಸ್, ತಾಯಿ ಶಿಲ್ಪಾ ಕೆಲಸದ ಕಾರಣದಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಹಿರಿಯರ ಒತ್ತಾಸೆಯಂತೆ ಮಕ್ಕಳನ್ನು ಬೈಚೇನಹಳ್ಳಿಯಲ್ಲಿಯೇ ಬಿಟ್ಟಿದ್ದರು. ಚಂದನಾ ಕಳೆದುಕೊಂಡು ಹೆತ್ತವರು, ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದ್ದಾರೆ. ಸದಾ ಅತ್ತಿಂದಿತ್ತ ಓಡಾಡುತ್ತಾ ಮನೆಯ ನಗುವಿಗೆ ಕಾರಣವಾಗಿದ್ದವಳು ತಮ್ಮೊಂದಿಗೆ ಇಲ್ಲ ಎಂಬುದನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.

ಈ ನಡುವೆ ‘ನಮಗೆ ಪರಿಹಾರ ಬೇಡ, ನಮ್ಮ ಮಗು ಬೇಕು’ ಎಂದು ಕುಟುಂಬಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಅಂಗಲಾಚುತ್ತಿದ್ದ ದೃಶ್ಯ ಸ್ಥಳದಲ್ಲಿ ಇದ್ದವರ ಮನ ಕಲುಕುತ್ತಿತ್ತು.

ಕಣ್ಣೆದುರೇ ಚಿರತೆ ಎತ್ಕೊಂಡೋಗೈತೆ

‘ಸಾರ್ ಏನು ಅಂತ ಹೇಳೋಣ. ಮೊಮ್ಮಕ್ಳು ಅಂಗ್ಳದಲ್ಲಿ ಆಟಾಡ್ತಿದ್ರು. ನಾನು ಸ್ವಲ್ಪ ದೂರದಲ್ಲೇ ಟಿಲ್ಲರ್ ಸರಿಪಡಿಸ್ತಿದ್ದೆ. ಸೌಂಡ್‌ ಬಂತು ಅಂತ ನೋಡ್ದಾಗ, ನನ್ ಕಣ್ಣೆದುರಿಗೆ ಮೊಮ್ಮಗಳ್ನನ್ನು ಚಿರತೆ ಎತ್ಕೊಂಡೋಗೈತೆ. ರಕ್ತದ ಹನಿ ನೋಡ್ಕೊಂಡೇ ಹೋದಾಗ ಅರ್ಧ ಕಿ.ಮೀ ದೂರದಲ್ಲಿ ಮೊಮ್ಮಗಳು ಸತ್ತ್ ಬಿದ್ದವ್ಳೆ. ನನ್ ಕಂದನಿಗೆ ಬಂದ ಕಷ್ಟ ಯಾರಿಗೂ ಬರ್‌ಬಾರ್ದು ಸಾರ್’ ಎಂದು ಕಣ್ಣೀರಾದರು ಚಂದನಾಳ ಅಜ್ಜ ದಾಸೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.