ADVERTISEMENT

ದೀನರ ಕಲ್ಯಾಣ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಣ

ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ₹1,000 ಕೋಟಿ l ಸಂಧ್ಯಾ ಸುರಕ್ಷಾ, ವಿಧವಾ ವೇತನ ₹200 ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 28 ಜುಲೈ 2021, 19:56 IST
Last Updated 28 ಜುಲೈ 2021, 19:56 IST
ಬೆಂಗಳೂರಿನ ರಾಜಭವನದಲ್ಲಿ ಬುಧವಾರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಮಾಣವಚನ ಬೋಧಿಸಿದರು. ಬೊಮ್ಮಾಯಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನ ರಾಜಭವನದಲ್ಲಿ ಬುಧವಾರ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪ್ರಮಾಣವಚನ ಬೋಧಿಸಿದರು. ಬೊಮ್ಮಾಯಿ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು  – ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಸವರಾಜ ಬೊಮ್ಮಾಯಿ, ಮೊದಲ ದಿನವೇ ನಡೆಸಿದ ಚೊಚ್ಚಲ ಸಂಪುಟ ಸಭೆಯಲ್ಲಿ ರೈತರು, ಹಿರಿಯರು, ವಿಧವೆಯರು ಮತ್ತು ಅಂಗವಿಕಲರಿಗೆ ಆದ್ಯತೆ ನೀಡುವ ನಿರ್ಣಯ ಕೈಗೊಳ್ಳುವ ಮೂಲಕ ತಮ್ಮ ಆಡಳಿತದ ದಿಕ್ಸೂಚಿ ಏನಿರಲಿದೆ ಎಂದು ಸೂಚ್ಯವಾಗಿ ತೋರಿಸಿದ್ದಾರೆ.

ರಾಜಭವನದಲ್ಲಿ ಮಂಗಳವಾರ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ, ವಿಧಾನಸೌಧಕ್ಕೆ ಬಂದ ಅವರು ಒಬ್ಬರೇ ಸಚಿವ ಸಂಪುಟ ಸಭೆ ನಡೆಸಿದರು.

ನಿಕಟ ಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಗೃಹ ಮತ್ತು ಕಾನೂನು ಸಚಿವರಾಗಿ ಸಚಿವ ಸಂಪುಟ ಸಭೆಯ ನಿರ್ಣಯಗಳನ್ನು ಸುದ್ದಿಗಾರರಿಗೆ ವಿವರಿಸುತ್ತಿದ್ದ ಅವರು, ಮುಖ್ಯಮಂತ್ರಿಯಾಗಿ ಸುದ್ದಿಗೋಷ್ಠಿ ನಡೆಸಿದ್ದು ಮಂಗಳವಾರದ ವಿಶೇಷ.

ADVERTISEMENT

‘ರಾಜ್ಯದ ರೈತರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೊಸದಾಗಿ ಶಿಷ್ಯ ವೇತನ ನೀಡಲು ತೀರ್ಮಾನಿಸಿದ್ದು, ಇದಕ್ಕಾಗಿ ₹1,000 ಕೋಟಿ ಹೆಚ್ಚುವರಿ ಹಣ ಮೀಸಲಿಡಲು ನಿರ್ಧರಿಸಲಾಗಿದೆ’ ಎಂದರು.

ರೈತರ ಮಕ್ಕಳು ವಿದ್ಯೆ ಮತ್ತು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಅವರು ಮುಖ್ಯವಾಹಿನಿಗೆ ಬರಬೇಕು ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಘೋಷಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಬರುವ ದಿನಗಳಲ್ಲಿ ವಿಸ್ತೃತ ಮಾಹಿತಿ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

‘ಸಂಧ್ಯಾ ಸುರಕ್ಷಾ’ ಮಾಸಾಶನ ಹೆಚ್ಚಳ: ‘ಸಂಧ್ಯಾ ಸುರಕ್ಷಾ’ ಯೋಜನೆಯಡಿ ನೀಡುತ್ತಿದ್ದ ಮಾಸಾಶನವನ್ನು ₹1,000 ದಿಂದ ₹1,200 ಕ್ಕೆ ಹೆಚ್ಚಿಸಲಾಗಿದೆ. ಸುಮಾರು 35.98 ಲಕ್ಷ ಫಲಾನುಭವಿಗಳಿಗೆ ಇದರಿಂದ ಪ್ರಯೋಜನವಾಗಲಿದ್ದು, ₹863.52 ಕೋಟಿ ಬೇಕಾಗುತ್ತದೆ ಎಂದರು.

ವಿಧವಾ ವೇತನದಡಿ ನೀಡಲಾಗುತ್ತಿದ್ದ ಮಾಸಾಶನ ₹600 ರಿಂದ ₹800 ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ₹414 ಕೋಟಿ ವೆಚ್ಚವಾಗಲಿದ್ದು, 17.25 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಅಂಗವಿಕಲರ ವೇತನದಡಿ ಶೇ 40 ರಿಂದ 75 ರಷ್ಟು ಅಂಗವಿಕಲತೆ ಹೊಂದಿರುವವರಿಗೆ ನೀಡುತ್ತಿರುವ ಮಾಸಾಶನವನ್ನು ₹600 ರಿಂದ ₹800 ಕ್ಕೆ ಹೆಚ್ಚಿಸಲಾಗಿದೆ. ಇದಕ್ಕಾಗಿ ₹90 ಕೋಟಿ ವೆಚ್ಚವಾಗಲಿದ್ದು, 3.66 ಲಕ್ಷ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ಹಣದುಬ್ಬರ ಹೆಚ್ಚಾಗಿರುವುದರಿಂದ ಈ ವರ್ಗಗಳಿಗೆ ಸಾಮಾಜಿಕ ಭದ್ರತೆ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಜನಕಲ್ಯಾಣ, ಜನಪರವಾದ ಕ್ರಮಗಳನ್ನು ಕೈಗೊಳ್ಳಲಿದ್ದು, ಅದರಲ್ಲಿ ವಿಶೇಷವಾಗಿ ದೀನದಲಿತರ, ಹಿಂದುಳಿದ ವರ್ಗಗಳ, ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ನಾವದಗಿ ಮುಂದುವರಿಕೆ: ರಾಜ್ಯದ ಅಡ್ವೊಕೇಟ್‌ ಜನರಲ್‌ ಆಗಿ ಪ್ರಭುಲಿಂಗ ನಾವದಗಿ ಅವರನ್ನು ಮುಂದುವರಿಸಲು ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದೂ ಬೊಮ್ಮಾಯಿ ಹೇಳಿದರು.

ಇಂದು ಕಾರವಾರಕ್ಕೆ ಭೇಟಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ಕಾರವಾರದಿಂದ ವಾಪಸ್‌ ಬಂದ ಬಳಿಕ ಅಧಿಕಾರಿಗಳ ಜತೆ ಸಭೆ ಮಾಡಿ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ’ ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್‌.ಯಡಿಯೂರಪ್ಪ ಅವರು ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದರು. ಉತ್ತರಕನ್ನಡ ಜಿಲ್ಲೆಗೆ ಹೋಗುವ ಮೊದಲೇ ಅವರು ರಾಜೀನಾಮೆ ಕೊಡಬೇಕಾಗಿ ಬಂದಿತು.

ಬೊಮ್ಮಾಯಿ ಅವರನ್ನು ಒಪ್ಪಿಕೊಂಡಿದ್ದೇವೆ: ಯತ್ನಾಳ

‘ಸೂಕ್ತ ಸಮಯದಲ್ಲಿ ಏನು ನಿರ್ಣಯ ಮಾಡಬೇಕಿತ್ತೋ ಅದನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ. ಈ ನಿರ್ಧಾರಕ್ಕೆ ಅನೇಕ ಕಾರಣಗಳಿರುತ್ತವೆ. ಎಲ್ಲವೂ ನಮಗೆ ತೃಪ್ತಿ ಆಗುತ್ತದೆ ಎಂದೇನಿಲ್ಲ. ಬಸವರಾಜ ಬೊಮ್ಮಾಯಿ ಅವರನ್ನು ಒಪ್ಪಿಕೊಂಡಿದ್ದೇವೆ. ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿದ್ದೇವೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಮಂತ್ರಿಯಾಗುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಅರ್ಜಿ ಹಾಕುವುದಿಲ್ಲ, ಅದಕ್ಕಾಗಿ ದೆಹಲಿಗೂ ಹೋಗುವುದಿಲ್ಲ. ಬೊಮ್ಮಾಯಿ ಅವರು ಯಡಿಯೂರಪ್ಪ ಕೃಪಾಪೋಷಿತ ಮುಖ್ಯಮಂತ್ರಿ ಎಂದು ಭಾವಿಸುವುದು ತಪ್ಪು. ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್‌ ರೀತಿ ಬೊಮ್ಮಾಯಿ ಎಲ್ಲವನ್ನೂ ಕೇಳುವುದಿಲ್ಲ. ಅವರು ತುಂಬಾ ಜಾಣರು. ಮೂರು ತಿಂಗಳಲ್ಲೇ ಎಲ್ಲವೂ ಗೊತ್ತಾಗಲಿದೆ ಎಂದರು.

***

ನಾನು ಯಾರದೇ ರಬ್ಬರ್ ಸ್ಟಾಂಪ್‌ ಆಗಲ್ಲ. ನನ್ನ ಆಡಳಿತ ಜನಪರ ಆಡಳಿತವಾಗಿರುತ್ತದೆ. ಆ ಸ್ಟಾಂಪ್‌ ಒತ್ತಿ ಹೋಗುತ್ತೇನೆ ಬಸವರಾಜ

- ಬೊಮ್ಮಾಯಿ,ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.