ADVERTISEMENT

ಮಗನ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟ ಮುಖ್ಯಮಂತ್ರಿ: ಜಗದೀಶ್‌ ಸದಂ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 12:59 IST
Last Updated 25 ಮಾರ್ಚ್ 2021, 12:59 IST

ಬೆಂಗಳೂರು: ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ತಿದ್ದುಪಡಿ ತಂದಿರುವುದು ಖಂಡನೀಯ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಆತನ ಶಿಷ್ಯಂದಿರು ಭ್ರಷ್ಟಾಚಾರದಲ್ಲಿ ತೊಡಗಿಕೊಳ್ಳಲು ರಹದಾರಿ ಮಾಡಿಕೊಟ್ಟಂತಾಗಿದೆ’ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಇದು ಜನ ವಿರೋಧಿ ನಡೆ. ಅಡ್ಡದಾರಿಯ ಮೂಲಕ ಬಹಳ ತರಾತುರಿಯಲ್ಲಿ ಕಾಯ್ದೆಗೆ ಅಂಗೀಕಾರ ನೀಡಲಾಗಿದೆ. ಟೆಂಡರ್‌ ಕರೆಯದೆ ₹2 ಕೋಟಿ ಮೊತ್ತದವರೆಗಿನ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಮೂಲಕ ಅನುಷ್ಠಾನಗೊಳಿಸಲು ಅನುವು ಮಾಡಿಕೊಡುವುದು ಈ ಕಾಯ್ದೆಯ ಉದ್ದೇಶ. ಇದರಿಂದ ಭ್ರಷ್ಟಾಚಾರಕ್ಕೆ ಮತ್ತಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ. ಕೆಟಿಪಿಪಿ ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ’ ಎಂದರು.

ಆಮ್‌ ಆದ್ಮಿ ಪಕ್ಷದ ಬೆಂಗಳೂರು ನಗರ ಘಟಕದ ಉಪಾಧ್ಯಕ್ಷ ಸುರೇಶ್‌ ರಾಥೋಡ್‌ ‘ಸರ್ಕಾರ ಕೂಡಲೇ ಈ ಕಾಯ್ದೆ ಹಿಂಪಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುತ್ತದೆ’ ಎಂದು ಸರ್ಕಾರವನ್ನು ಎಚ್ಚರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.