ADVERTISEMENT

‘ಬ್ರಾಹ್ಮಣತ್ವ ಉಳಿಯಲು ಬ್ರಾಹ್ಮಣರು ಒಂದಾಗಿ’

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ಮನವಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:45 IST
Last Updated 4 ಫೆಬ್ರುವರಿ 2023, 16:45 IST
ಸಮಾರಂಭದಲ್ಲಿ ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಚಿತ್ಪಾವನ ಸಮಾಜದ ಅಧ್ಯಕ್ಷ ಎಂ.ಗಣಪತಿ ಜೋಶಿ, ಸದಸ್ಯೆ ನಂದಿನಿ ಜೋಶಿ, ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋವಿಂದ ಎನ್. ಫಡಕೆ ಮತ್ತು ಚಿತ್ಪಾವನ ಸಮಾಜದ ಗೌರವಾಧ್ಯಕ್ಷ ವಿಷ್ಣು ಡೋಂಗ್ರೆ ಇದ್ದಾರೆ. -ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಅವರನ್ನು ಸನ್ಮಾನಿಸಲಾಯಿತು. (ಎಡದಿಂದ) ಚಿತ್ಪಾವನ ಸಮಾಜದ ಅಧ್ಯಕ್ಷ ಎಂ.ಗಣಪತಿ ಜೋಶಿ, ಸದಸ್ಯೆ ನಂದಿನಿ ಜೋಶಿ, ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋವಿಂದ ಎನ್. ಫಡಕೆ ಮತ್ತು ಚಿತ್ಪಾವನ ಸಮಾಜದ ಗೌರವಾಧ್ಯಕ್ಷ ವಿಷ್ಣು ಡೋಂಗ್ರೆ ಇದ್ದಾರೆ. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬ್ರಾಹ್ಮಣತ್ವ ಉಳಿಯಬೇಕಾದರೆ ಬ್ರಾಹ್ಮಣ ಸಮುದಾಯದವರೆಲ್ಲರೂ ಆಂತರಿಕ ಕಚ್ಚಾಟಗಳನ್ನು ಬಿಟ್ಟು ಸಂಘಟಿತರಾಗಬೇಕು’ ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದ ಮೂರ್ತಿ ತಿಳಿಸಿದರು.

ಚಿತ್ಪಾವನ ಸಮಾಜ ನಗರದಲ್ಲಿ ಶನಿವಾರ ಹಮ್ಮಿಕೊಂಡ ಸಮಾಜದ ‘ಸುವರ್ಣ ಸಂಭ್ರಮ’ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. ‘ಬ್ರಾಹ್ಮಣ ಸಮುದಾಯದಲ್ಲಿ ಹಲವು ಉಪಜಾತಿಗಳಿದ್ದು, ಅವುಗಳ ನಡುವೆ ಆಂತರಿಕ ಕಚ್ಚಾಟ ನಡೆಯುತ್ತಲೇ ಇರುತ್ತದೆ. ಬ್ರಾಹ್ಮಣ ಸಮಾಜದಲ್ಲಿರುವ ಮಠಗಳಲ್ಲಿ ಒಂದು ಮಠವನ್ನು ಕಂಡರೆ ಮತ್ತೊಂದು ಮಠಕ್ಕೆ ಆಗದಿರುವುದು ವಿಪರ್ಯಾಸ. ರಾಜ್ಯದಲ್ಲಿ 42.5 ಲಕ್ಷ ಮಂದಿ ಬ್ರಾಹ್ಮಣರಿದ್ದಾರೆ. 21 ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಬ್ರಾಹ್ಮಣರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ನಮ್ಮೊಳಗಿನ ಕಚ್ಚಾಟದಿಂದ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿದೆ ನಮ್ಮ ಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬ್ರಾಹ್ಮಣರು ರಾಜಕೀಯವಾಗಿ ಸಂಘಟಿತವಾಗಬೇಕು. ನಮ್ಮ ಹಕ್ಕು ಮತ್ತು ಸವಲತ್ತುಗಳನ್ನು ಸಂಘಟನೆ ಮೂಲಕ ಕೇಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ವೀರ್ ಸಾವರ್ಕರ್, ಚಂದ್ರಶೇಖರ್ ಅಜಾದ್ ಸೇರಿ ಹಲವು ಬ್ರಾಹ್ಮಣರು ಹೋರಾಟ ಮಾಡಿದ್ದಾರೆ. ಇಂತಹ ಸಮುದಾಯ ಈಗ ತುಳಿತಕ್ಕೆ ಒಳಗಾಗಿದೆ’ ಎಂದರು.

ADVERTISEMENT

ವಿಧಾನ ಪರಿಷತ್ತಿನ ಸದಸ್ಯ ಪ್ರತಾಪ್ ಸಿಂಹ ನಾಯಕ್, ‘ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ಪಾವನ ಸಮುದಾಯದವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಭಾರತದಲ್ಲೀಗ ಹಲವು ಬದಲಾವಣೆ ಕಾಣುತ್ತಿದ್ದೇವೆ. ಅಯೋಧ್ಯೆಯಲ್ಲಿ ನಡೆದ ರಾಮ ಮಂದಿರ ಹೋರಾಟದಲ್ಲಿ ನಾನು ಸಹ ಭಾಗವಹಿಸಿದ್ದೆ. ಅಲ್ಲಿ ಈಗ ರಾಮಮಂದಿರ ನೋಡಿದಾಗ ಮನಸ್ಸಿಗೆ ಸಂತೋಷವಾಗುತ್ತದೆ’ ಎಂದು ಹೇಳಿದರು.

ಎಡನೀರು ಮಠದ ಸಚ್ಚಿದಾನಂದಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.