ADVERTISEMENT

ವಸತಿ ಯೋಜನೆ ಅನುದಾನ ಸ್ಥಗಿತ

ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಭಗ್ನ

ಜಿ.ಬಿ.ನಾಗರಾಜ್
Published 30 ಜನವರಿ 2019, 19:37 IST
Last Updated 30 ಜನವರಿ 2019, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ಜಾರಿಗೊಳಿಸಿದ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ನಿವಾಸ್‌ ಯೋಜನೆಗೆ ಐದು ತಿಂಗಳಿಂದ ಅನುದಾನ ಬಿಡುಗಡೆಯಾಗಿಲ್ಲ.

ಸ್ವಂತ ಮನೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಸಾವಿರಾರು ಫಲಾನುಭವಿಗಳ ಕನಸು ಇದರಿಂದ ಭಗ್ನಗೊಂಡಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ಗ್ರಾಮ ಪಂಚಾಯಿತಿಗೆ ಅಲೆದಾಡುತ್ತಿದ್ದಾರೆ. ಬಸವ ವಸತಿ ಯೋಜನೆಯ ಕೆಲವರಿಗೆ ಡಿಸೆಂಬರ್‌ ಅಂತ್ಯದಲ್ಲಿ ಅಲ್ಪ ಅನುದಾನ ಲಭ್ಯವಾಗಿದೆ.

ಆಶ್ರಯ ಮನೆ ಮಂಜೂರಾಗಿರುವ ಖುಷಿಗೆ ಅನೇಕರು ಹಳೆ ಮನೆಗಳನ್ನು ಕೆಡವಿದ್ದಾರೆ. ಅಡಿಪಾಯ ಹಾಕಿ ಹಲವು ತಿಂಗಳುಗಳಿಂದ ಅನುದಾನಕ್ಕೆ ಎದುರು ನೋಡುತ್ತಿದ್ದಾರೆ. ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಜೋಪಡಿಯಲ್ಲಿಯೂ ವಾಸ ಮಾಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅನುದಾನ ಸ್ಥಗಿತಗೊಳ್ಳುವ ಆತಂಕ ಫಲಾನುಭವಿಗಳಿಗೆ ಎದುರಾಗಿದೆ.

ADVERTISEMENT

ಆಶ್ರಯ ಮನೆ ನಿರ್ಮಿಸಿಕೊಳ್ಳುವ ಫಲಾನುಭವಿಗಳಿಗೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ₹ 1.5 ಲಕ್ಷದಿಂದ ₹ 1.65 ಲಕ್ಷದವರೆಗೂ ಅನುದಾನ ನೀಡುತ್ತಿದೆ. 20X30 ಹಾಗೂ 15X20 ಸುತ್ತಳತೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶವಿದೆ. ಅಡಿಪಾಯ, ಕಿಟಕಿ ನಿಲ್ಲಿಸುವುದು, ಚಾವಣಿ ಹಾಗೂ ಸಂಪೂರ್ಣ ಮನೆ ನಿರ್ಮಾಣವಾದಾಗ ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಜಿ‍ಪಿಎಸ್‌ ತಂತ್ರಜ್ಞಾನದ ಮೂಲಕ ನಿರ್ಮಾಣ ಹಂತದ ಕಟ್ಟಡವನ್ನು ಪರಿಶೀಲಿಸಿ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಇದೆ.

ಎಂ.ಕೆ.ಹಟ್ಟಿಯ ನಾಗರತ್ನ ಎಂಬುವರಿಗೆ ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ ಆಶ್ರಯ ಮನೆ ಮಂಜೂರಾಗಿದೆ. ಮನೆ ನಿರ್ಮಾಣ ಕೆಲಸವನ್ನು 10 ತಿಂಗಳ ಹಿಂದೆ ಕೈಗೆತ್ತಿಕೊಂಡಿದ್ದಾರೆ. ಈವರೆಗೂ ಅವರಿಗೆ ಹಣ ಬಿಡುಗಡೆಯಾಗಿಲ್ಲ. ಬಸವ ವಸತಿ ಯೋಜನೆಯ ಫಲಾನುಭವಿ ಕಲಾವತಿ ಸುರೇಶ್‌ ಅವರದೂ ಇದೇ ಸ್ಥಿತಿ. ಮನೆ ನಿರ್ಮಾಣ ಕಾಮಗಾರಿ ಮುಂದುವರಿಸಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

2017–18ನೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ ಅಂಬೇಡ್ಕರ್‌ ವಸತಿ ಯೋಜನೆಯಡಿ 1.56 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿತ್ತು. ಈ ಪೈಕಿ 16 ಸಾವಿರ ಮನೆಗಳು ಮಾತ್ರ ಪೂರ್ಣಗೊಂಡಿವೆ. 61 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಇನ್ನೂ ಅನುಮೋದನೆ ದೊರೆತಿಲ್ಲ. ಬಸವ ವಸತಿ ಯೋಜನೆಯಲ್ಲಿ ನಿಗದಿಯಾಗಿದ್ದ ಮನೆಗಳಲ್ಲಿ ಇನ್ನೂ 44 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಅಡಿಪಾಯ ಕೂಡ ಹಾಕಲಾಗಿಲ್ಲ. ಕಳೆದ ಆರ್ಥಿಕ ವರ್ಷದಲ್ಲಿ ಕೈಗೆತ್ತಿಕೊಂಡ ಮನೆಗಳು ಪೂರ್ಣಗೊಳ್ಳದೇ ಇರುವುದರಿಂದ ಪ್ರಸಕ್ತ ವರ್ಷದಲ್ಲಿ ವಸತಿ ಯೋಜನೆಗೆ ಜಿಲ್ಲೆಯಲ್ಲಿ ಗುರಿ ನಿಗದಿಪಡಿಸಿಲ್ಲ.

‘ಮನೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಫಲಾನುಭವಿಗಳಿಗೆ ಒತ್ತಡ ಹೇರಲಾಗುತ್ತಿದೆ. ಕಾಲ ಕಾಲಕ್ಕೆ ಅನುದಾನ ಮಾತ್ರ ಬಿಡುಗಡೆಯಾಗುತ್ತಿಲ್ಲ. ಸ್ವಂತ ಹಣದಲ್ಲಿ ಮನೆ ಕಟ್ಟಿಕೊಂಡರೆ ಅನುದಾನ ಕೈತಪ್ಪಬಹುದು ಎಂಬ ಆತಂಕ ಅನೇಕರನ್ನು ಕಾಡುತ್ತಿದೆ. ಬಸವ ವಸತಿ ಯೋಜನೆಯಡಿ ಮನೆ ನಿರ್ಮಿಸುವ ಗುರಿಯನ್ನು ಜನವರಿ ಅಂತ್ಯಕ್ಕೆ ನೀಡಲಾಗಿದೆ. ವಾಸ್ತವವಾಗಿ ಇದು ಅಸಾಧ್ಯ’ ಎನ್ನುತ್ತಾರೆ ಅಧಿಕಾರಿಗಳು.

*
ಅನುದಾನ ಕೊರತೆಯಿಂದ ವಸತಿ ಯೋಜನೆ ಪ್ರಗತಿ ಕುಂಠಿತವಾಗಿದೆ. ಸ್ವಂತ ಹಣದಲ್ಲಿ ಮನೆ ಕಟ್ಟಲು ಜನ ಹಿಂಜರಿಯುತ್ತಿದ್ದಾರೆ. ನಿತ್ಯ ದೂರುಗಳು ಬರುತ್ತಿವೆ.

-ಟಿ.ಶ್ರೀಧರ್‌, ಮುಖ್ಯಯೋಜನಾಧಿಕಾರಿ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.