ADVERTISEMENT

ಕ್ರಿಸ್‌ಮಸ್‌ನಲ್ಲಿ ಶಾಂತಿ ಪ್ರೀತಿ ಹಂಚೋಣ:ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಲೋಬೊ ಸಂದೇಶ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 12:26 IST
Last Updated 25 ಡಿಸೆಂಬರ್ 2019, 12:26 IST
ಕ್ರಿಸ್‌ಮಸ್‌ ಅಂಗವಾಗಿ ಮಂಗಳೂರಿನ ಸೇಂಟ್‌ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಸಂಭ್ರಮದಿಂದ ಭಾಗವಹಿಸಿದ್ದರು. – ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ
ಕ್ರಿಸ್‌ಮಸ್‌ ಅಂಗವಾಗಿ ಮಂಗಳೂರಿನ ಸೇಂಟ್‌ ಸೆಬಾಸ್ಟಿಯನ್‌ ಚರ್ಚ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸಾವಿರಾರು ಜನರು ಸಂಭ್ರಮದಿಂದ ಭಾಗವಹಿಸಿದ್ದರು. – ಪ್ರಜಾವಾಣಿ ಚಿತ್ರ/ಗೋವಿಂದರಾಜ ಜವಳಿ   

ಉಡುಪಿ: ಇಡೀ ಮಾನವಕುಲ ಜಾತಿ, ಮತಗಳ ಭೇದವಿಲ್ಲದೆ ಆಚರಿಸುವ ಹಬ್ಬ ಕ್ರಿಸ್‌ಮಸ್. ಹಬ್ಬದ ಕೇಂದ್ರ ವ್ಯಕ್ತಿ ಯೇಸು. ಮಾನವನ ಮೇಲಿನ ಅತಿಯಾದ ಪ್ರೀತಿಯಿಂದ ಸರ್ವಶಕ್ತನಾದ ದೇವರು ಶಿಶುವಾಗಿ, ದನದ ಕೊಟ್ಟಿಗೆಯಲ್ಲಿ ಜನ್ಮತಳೆದ ಮಹಾ ರಹಸ್ಯದ ಆಚರಣೆಯೇ ಕ್ರಿಸ್‍ಮಸ್.

ದೇವರು ಭೂಲೋಕವನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ ತಮಗಿ ರುವ ಒಬ್ಬನೇ ಪುತ್ರನನ್ನು ಇಲ್ಲಿಗೆ ಕಳಿಸಿ ಕೊಟ್ಟರು ಎನ್ನುತ್ತದೆ ಪವಿತ್ರ ಬೈಬಲ್ ಗ್ರಂಥ. ಮನುಷ್ಯ ಮನುಷ್ಯತ್ವ ಮರೆತಾಗ, ಮನುಷ್ಯನಾಗಿ ಜೀವಿಸುವುದನ್ನು ಕಲಿ ಸಲು ದೇವರು ಧರೆಗಿಳಿದ ಹಬ್ಬವನ್ನೂ ಕ್ರಿಸ್‌ಮಸ್‌ ಎಂದು ಕರೆಯಲಾಗುತ್ತದೆ.

ಮನುಷ್ಯನಾಗಿ ಹುಟ್ಟಿದ ಯೇಸು ಜಗತ್ತಿಗೆ ನೀಡಿದ ಕಾಣಿಕೆ ಎಂದರೆ ಶಾಂತಿ-ಸಮಾಧಾನ. ಆದರೆ, ಇಂದು ಸಮಾಜದಲ್ಲಿ ಅಶಾಂತಿ, ಅಸಮಾನತೆ, ಅನ್ಯಾಯ, ಬಡತನ, ನಿರುದ್ಯೋಗ, ಹಿಂಸೆ, ಶೋಷಣೆ, ರೋಗ–ರುಜಿನ, ದ್ವೇಷ, ಯುದ್ಧ, ಅತ್ಯಾಚಾರ, ಮತಾಂಧತೆ, ಪರಮತ ಅಸಹಿಷ್ಣುತೆ ಕಾಣುತ್ತಿದ್ದೇವೆ.

ADVERTISEMENT

ಈ ಸಮಸ್ಯೆಗಳಿಗೆಲ್ಲ ಉತ್ತರ ‘ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು‌’ ಖಂಡಿತ ಅಲ್ಲ. ಬದಲಾಗಿ ಪ್ರೀತಿ ಮಾತ್ರ. ಈ ಪ್ರೀತಿಯ ಮಹತ್ವವನ್ನು ತಿಳಿಸಲೆಂದೇ, ಹಂಚಲೆಂದೇ ಯೇಸು ಜನ್ಮತಾಳಬೇಕಾಯಿತು.

ಯೇಸುವಿನ ರಾಜ್ಯದಲ್ಲಿ ಶಾಂತಿಹೇಗೆ ನೆಲೆಸಿರುತ್ತದೆ ಎಂದರೆ,ತೋಳ–ಕುರಿ ಒಂದಾಗಿ ಬಾಳುವಂತೆ, ಮೇಕೆ, ಚಿರತೆ ಜೊತೆಯಾಗಿ ಮಲಗುವಂತೆ, ಕರು, ಸಿಂಹ ಒಟ್ಟಾಗಿ ಮೊಲೆಯುಣ್ಣುವಂತೆ, ಕರಡಿ ಆಕಳು ಒಟ್ಟಿಗೆ ಮೇಯುವಂತೆ, ಹಸುಗೂಸು ನಾಗರಹುತ್ತದ ಮೇಲೆ ಆಡುವಂತೆ ಯಾವುದೇ ಕೇಡುಗಳು ಉಂಟಾಗುವುದಿಲ್ಲ.

ಯೇಸು ಜನಿಸಿದ ದಿನವೇ ಶಾಂತಿಯೂ ಜನ್ಮತಾಳಿತು. ಶಾಂತಿಯ ವಾಗ್ದಾನ ಮಾಡಿದ ಯೇಸು,‘ನಾನು ಶಾಂತಿ ಸಮಾಧಾನವನ್ನು ಜನರಿಗೆ ಬಿಟ್ಟು ಹೋಗುತ್ತೇನೆ; ಒಬ್ಬರನ್ನೊಬ್ಬರು ಪ್ರೀತಿಸಿದರೆ ಮಾತ್ರ ಶಾಂತಿ ನೆಲೆಸಲು ಸಾಧ್ಯ. ಶಾಂತಿಯಿದ್ದಲ್ಲಿ ಮಾತ್ರ ಭಾವೈಕ್ಯತೆ, ಸಾಮರಸ್ಯ, ಸಹಬಾಳ್ವೆ, ಸಮಾಧಾನ ಸಾಧ್ಯ ಎಂದು ಹೇಳಿ ಹೋದರು.

‘ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು ಹಾಗೂ ನಿಜವಾದ ದೇವರ ಮಕ್ಕಳು. ಹಾಗಾಗಿ, ಎಲ್ಲರೂ ಶಾಂತಿಧೂತರಾಗಿಯೇ ಬಾಳೋಣವೇ, ಶಾಂತಿ ಪ್ರೀತಿಯ ಭಾರತವನ್ನು ಕಟ್ಟೋಣವೇ.

ಸರ್ವೇಜನಾಃ ಸುಖಿನೋ ಭವಂತು! ವಾಲೈಕುಮ್ ಸಲಾಮ್! ಒಬ್ಬರನ್ನೊಬ್ಬರು ಪ್ರೀತಿಸಿರಿ, ಈ ಎಲ್ಲ ಸಾಲುಗಳ ತಾತ್ಪರ್ಯ ಒಂದೇ. ಸುಖ, ಶಾಂತಿ, ಪ್ರೀತಿಯಿಂದ ಬಾಳಲಿ ಎಂಬುದು. ಇದೇ ಕ್ರಿಸ್ತ ಜಯಂತಿಯ ಸಂದೇಶ.

ಲೇಖಕ: ಉಡುಪಿಯಧರ್ಮಾಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.