ADVERTISEMENT

ಸಿಐಡಿ ಹೆಗಲಿಗೆ ಶೂಟ್‌ಔಟ್‌ ಪ್ರಕರಣ

ಇನ್‌ಸ್ಪೆಕ್ಟರ್ ಕ್ರಮದ ಕುರಿತು ವ್ಯಾಪಕ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಮೇ 2019, 18:16 IST
Last Updated 17 ಮೇ 2019, 18:16 IST

ಮೈಸೂರು: ರದ್ದಾದ ನೋಟುಗಳನ್ನು ಬದಲಾಯಿಸಿಕೊಡುತ್ತಿತ್ತು ಎನ್ನಲಾದ ಗುಂಪೊಂದರ ಮೇಲೆ ಮೈಸೂರು ಪೊಲೀಸರು ಗುರುವಾರ ನಡೆಸಿದ ಗುಂಡಿನ ದಾಳಿ ಪ್ರಕರಣದ ತನಿಖೆಯನ್ನು, ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಸಿಐಡಿಗೆ ವಹಿಸಿದ್ದಾರೆ.

ನಾಲ್ವರು ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಬಂದಿದ್ದು, ಪ್ರಕರಣದ ವಿವರಗಳನ್ನು ಕಲೆ ಹಾಕಿದೆ.

ಗುಂಡಿನ ದಾಳಿಯಲ್ಲಿ ಮೃತಪಟ್ಟ ಸುಖವಿಂದರ್‌ ಸಿಂಗ್ ಸಂಬಂಧಿಕರು ಪಂಜಾಬ್‌ನ ಫರೀದಾಕೋಟ್‌ನಿಂದ ಹೊರಟಿದ್ದಾರೆ. ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಈ ಮಧ್ಯೆ ಶುಕ್ರವಾರ ಬೆಳಿಗ್ಗೆ ಅಪರಾಧ ಪತ್ತೆ ವಿಭಾಗದ ಎಸಿಪಿ ಮರಿಯಪ್ಪ ನೇತೃತ್ವದ ತನಿಖಾ ತಂಡವು, ಮಾಹಿತಿದಾರ ಮತ್ತು ಗುಂಡಿನ ದಾಳಿ ನಡೆಸಿದ ಇನ್‌ಸ್ಪೆಕ್ಟರ್ ಕುಮಾರ್ ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದೆ.

ಮಾಹಿತಿದಾರನಿಗೂ ಆರೋಪಿಗಳಿಗೂ ಇರುವ ಸಂಬಂಧ, ಇನ್‌ಸ್ಪೆಕ್ಟರ್‌ಗೂ ಮಾಹಿತಿದಾರನಿಗೂ ಎಷ್ಟು ದಿನಗಳಿಂದ ಪರಿಚಯ ಇದೆ ಎಂಬ ವಿವರಗಳನ್ನು ಕಲೆ ಹಾಕಿದೆ.

ಈ ವೇಳೆ ಕೇವಲ 15 ದಿನಗಳಿಂದ ಮಾತ್ರವೇ ಪರಿಚಯ ಇದ್ದ ಮಾಹಿತಿದಾರನ ಮಾತನ್ನು ನಂಬಿ ಪೂರ್ವಾಪರ ವಿಚಾರಿಸದೇ ಏಕಾಏಕಿ ದಾಳಿ ನಡೆಸಿದ ಕ್ರಮದ ಕುರಿತು ಇನ್‌ಸ್ಪೆಕ್ಟರ್‌ ಅವರನ್ನು ತಂಡವು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ.

ಮಾಫಿಯಾದ ಆಳಅಗಲದ ಪರಿಚಯ ಇಲ್ಲದೇ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನೂ ನೀಡದೇ ಕಾರ್ಯಾಚರಣೆ ಕೈಗೊಂಡ ಕ್ರಮದ ಕುರಿತು ಹಿರಿಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಾರಿಯಾಗಿರುವ ಆರೋಪಿಗಳ ಪೈಕಿ ಒಬ್ಬಾತ ಬೆಂಗಳೂರಿನವನು ಎಂದು ಗೊತ್ತಾಗಿದೆ. ರೆಸಾರ್ಟ್‌ಗಳು, ಹೋಟೆಲ್‌ಗಳನ್ನು ಪೊಲೀಸರು ಜಾಲಾಡಿದ್ದಾರೆ. ಆರೋಪಿಗಳ ಪೈಕಿ ಒಬ್ಬಾತ ಬೆಂಗಳೂರಿನವನೆಂದು ಗೊತ್ತಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ‘ಇದೊಂದು ಸೂಕ್ಷ್ಮ ಪ್ರಕರಣ. ಸಿಐಡಿಗೆ ವಹಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.