ADVERTISEMENT

ಮನೆಯಿಂದಲೇ ಪ್ರತಿರೋಧ ಚಳವಳಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 18:40 IST
Last Updated 18 ಮೇ 2021, 18:40 IST
ಎಸ್‌.ವರಲಕ್ಷ್ಮಿ
ಎಸ್‌.ವರಲಕ್ಷ್ಮಿ   

ಬೆಂಗಳೂರು: ‌ಎಲ್ಲರಿಗೂ ಕೋವಿಡ್ ಲಸಿಕೆ, ಲಾಕ್‌ಡೌನ್ ಸಂದರ್ಭದಲ್ಲಿ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಮನೆಗಳಲ್ಲೇ ಮತ್ತು ಕೆಲಸದ ಸ್ಥಳಗಳಲ್ಲೇ ಇದೇ 21ರಂದು ಪ್ರತಿರೋಧ ಚಳವಳಿ ನಡೆಸಲು ಸಿಐಟಿಯು, ಕೆಪಿಆರ್‌ಎ‌ಸ್(ಕರ್ನಾಟಕ ಪ್ರಾಂತ ರೈತ ಸಂಘ) ಮತ್ತು ಎಐಎಡಬ್ಲ್ಯುಯು(ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ) ನಿರ್ಧರಿಸಿವೆ.

ಆನ್‌ಲೈನ್‌ನಲ್ಲಿ ಪ್ರತಿರೋಧ ವ್ಯಕ್ತಪಡಿಸುವ ಸಂಬಂಧ ಪೂರ್ವಭಾವಿ ಸಭೆಗಳನ್ನು ಎರಡು ದಿನಗಳಿದ ನಡೆಸಲಾಗುತ್ತಿದೆ. ಮಂಗಳವಾರ ನಡೆದ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮಿ, ‘ಎರಡನೇ ಅಲೆಯಲ್ಲಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಮೂರನೇ ಅಲೆ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎಲ್ಲರಿಗೂ ಲಸಿಕೆ ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ‘ಕಾರ್ಮಿಕರಿಗೆ ಇರುವ ಹಕ್ಕುಗಳನ್ನು ಕಿತ್ತು ಹಾಕುವ ಕಾನೂನುಗಳನ್ನು ಜಾರಿಗೆ ತರಲು ಸರ್ಕಾರ ತರಾತುರಿಯಲ್ಲಿದೆ. ಎಫ್‌ಕೆಸಿಸಿಐ ಮೂಲಕ ಕಾರ್ಖಾನೆಗಳ ಮಾಲೀಕರು ತಮಗೆ ಬೇಕಾದ ವಿನಾಯಿತಿಗಳನ್ನು ಪಡೆಯುತ್ತಿದ್ದಾರೆ. ಈ ರೀತಿಯ ರಾಜಕೀಯಗಳನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ ಕಾರ್ಮಿಕ ವರ್ಗ ಮತ್ತು ದೇಶಕ್ಕೆ ಉಳಿಗಾಲವಿಲ್ಲ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.