ADVERTISEMENT

ಸಿವಿಲ್‌ ದಾವೆ ಹೂಡಿ ಪರಿಹಾರ ಪಡೆಯಿರಿ: ಹೈಕೋರ್ಟ್‌

ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ತಕರಾರು

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 16:06 IST
Last Updated 29 ಜನವರಿ 2026, 16:06 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (ಕೆಎಫ್‌ಸಿಸಿ) ನಡೆಯುವ ಚುನಾವಣೆಯಲ್ಲಿ ಭಾಗವಹಿಸುವ ಮತದಾರರ ಅಂತಿಮ ಪಟ್ಟಿ ‍ಪ್ರಕಟಿಸುವಲ್ಲಿ ಬೈ–ಲಾ ನಿಯಮಗಳನ್ನು ಅನುಸರಿಸಿಲ್ಲ ಎಂಬ ತಕರಾರಿಗೆ ಸಂಬಂಧಿಸಿದಂತೆ ಸಕ್ಷಮ ನ್ಯಾಯಾಲಯದಲ್ಲಿ ಸಿವಿಲ್‌ ದಾವೆ ಹೂಡಿ ಪರಿಹಾರ ಪಡೆಯಿರಿ’ ಎಂದು ಹೈಕೋರ್ಟ್‌ ಅರ್ಜಿದಾರರಿಗೆ ನಿರ್ದೇಶಿಸಿದೆ.

ಚುನಾವಣೆ ರದ್ದುಪಡಿಸುವಂತೆ ಕೋರಿ ಅಭ್ಯರ್ಥಿಯೂ ಆದ ಎನ್ನಾರ್‌ ಕೆ.ವಿಶ್ವನಾಥ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ನ್ಯಾಯಾಲಯದ ನಿರ್ದೇಶನದ ಅನುಸಾರ ಚುನಾವಣಾಧಿಕಾರಿ ಮೆಮೊ ಸಲ್ಲಿಸಿದ್ದಾರೆ. ಅದರಲ್ಲಿ ಮತದಾರರ ಅಂತಿಮ ಪಟ್ಟಿಯನ್ನು ಚುನಾವಣಾ ವೇಳಾಪಟ್ಟಿ ಪ್ರಕಟಿಸುವುದಕ್ಕೂ ಹಿಂದೆಯೇ ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ. ಚುನಾವಣಾಧಿಕಾರಿ 2025ರ ಡಿಸೆಂಬರ್‌ 17 ಮತ್ತು 19ರಂದು ಮತದಾರರ ಪಟ್ಟಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಅರ್ಜಿದಾರರು ಜನವರಿ 14ರಂದು ಮತದಾರರ ಪಟ್ಟಿ ಪ್ರಕಟಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಮತದಾರರ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದಂತೆ ಅರ್ಜಿದಾರರು ಮತ್ತು ಚುನಾವಣಾಧಿಕಾರಿ ಮಧ್ಯದ ತಕರಾರನ್ನು, ಅರ್ಜಿದಾರರು ಸಿವಿಲ್‌ ದಾವೆ ಹೂಡಿ ಪರಿಹಾರ ಪಡೆಯಬಹುದು’ ಎಂದು ತಿಳಿಸಿದ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿದೆ.

ADVERTISEMENT

ಕೋರಿಕೆ ಏನಿತ್ತು?: ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2025–26ನೇ ಸಾಲಿನ ಪದಾಧಿಕಾರಿಗಳ ಚುನಾವಣೆಗೆ ಪ್ರಕಟಿಸಿರುವ ವೇಳಾಪಟ್ಟಿಯನ್ನು ರದ್ದುಗೊಳಿಸಬೇಕು. ಹೊಸ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು ಎಲ್ಲ ಅರ್ಹ ಸದಸ್ಯರ ಛಾಯಾಚಿತ್ರಗಳನ್ನು ಮತ್ತು ನಿಖರವಾದ ಚಂದಾದಾರಿಕೆಯ ಡೇಟಾ ಹೊಂದಿದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಕೆಎಫ್‌ಸಿಸಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಟೇಶಿ ವೆಂಕಟೇಶ್‌ಗೆ ನೋಟಿಸ್‌: ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಟೇಶಿ ವೆಂಕಟೇಶ್‌ ಸದಸ್ಯತ್ವ ರದ್ದುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ತಳ್ಳಿ ಹಾಕುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಪ್ರತಿವಾದಿ ಟೇಶಿ ವೆಂಕಟೇಶ್‌ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಡಿ.ಕೆ.ರಾಮಕೃಷ್ಣ ಸಲ್ಲಿಸಿದ್ದ ರಿಟ್‌ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ರದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಮೇಲ್ಮನವಿದಾರರ ಪರ ಪದಾಂಕಿತ ಹಿರಿಯ ವಕೀಲ ವಿ.ಲಕ್ಷ್ಮಿನಾರಾಯಣ ಅವರ ವಾದ ಆಲಿಸಿದ ನ್ಯಾಯಪೀಠ ಟೇಶಿ ವೆಂಕಟೇಶ್ ಅವರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಮಾರ್ಚ್‌ 3ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.