ADVERTISEMENT

ಒಳ ಮೀಸಲಾತಿ ವರ್ಗೀಕರಣ: ಚುನಾವಣಾ ತಂತ್ರ

ಅಸಮಾಧಾನ ವ್ಯಕ್ತಪಡಿಸಿದ ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಸಮುದಾಯಗಳು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:13 IST
Last Updated 25 ಮಾರ್ಚ್ 2023, 5:13 IST
   

ಬೆಂಗಳೂರು: ‘ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ಪ್ರಯತ್ನ ನ್ಯಾಯ ಸಮ್ಮತವಲ್ಲ. ಕೇವಲ ಚುನಾವಣಾ ತಂತ್ರ’ ಎಂದು ಪರಿಶಿಷ್ಟ ಜಾತಿಯಲ್ಲಿನ ಎಡಗೈ, ಬಲಗೈ ಸೇರಿ ಎಲ್ಲಾ ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ.

ಒಳಮೀಸಲಾತಿಗಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಮುಖಂಡರಾದ ಎಸ್‌.ಮಾರಪ್ಪ, ಅಂಬಣ್ಣ ಅರೋಲಿಕರ್, ಶಿವರಾಯ ಅಕ್ಕರಕಿ, ಕೇಶವಮೂರ್ತಿ, ಬಸವರಾಜ ಕೌತಾಳ, ಹೆಣ್ಣೂರು ಶ್ರೀನಿವಾಸ್, ಜೇಬಿರಾಜು, ಕರಿಯಪ್ಪ ಗುಡಿಮನಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ನಮ್ಮ‌ ಹಕ್ಕೊತ್ತಾಯಕ್ಕೆ‌ ಸಕಾಲದಲ್ಲಿ ಪರಿಗಣಿಸದೆ, ಚುನಾವಣೆ ಸಮಯದಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡುವ ನೆಪದಲ್ಲಿ ಕಾಟಾಚಾರಕ್ಕೆ ಕೇಂದ್ರಕ್ಕೆ ತಳ್ಳಿಹಾಕಿ ವರದಿಯು ಅಲ್ಲಿ ಕೊಳೆಯುವಂತೆ ಮಾಡಿ ಸಮುದಾಯಗಳನ್ನು ಇನ್ನಷ್ಡು ಸಂಕಷ್ಟಕ್ಕೆ ದೂಡುವ ಬಿಜೆಪಿಯ ಹುನ್ನಾರ ಈ ಮೂಲಕ ಬಯಲಾಗಿದೆ’ ಎಂದು
ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಈಗ ಮೀಸಲಾತಿ ಹೆಚ್ಚಳ ಮಾಡಿರುವುದು ಕಾನೂನುಬದ್ಧವಲ್ಲದ ಕಾರಣದಿಂದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಕೇಂದ್ರಕ್ಕೆ‌ ಕಳಿಸಿಕೊಡಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಆದರೆ, ಈಗಿನ‌ ಶಿಫಾರಸು ಅವೈಜ್ಞಾನಿಕವಾಗಿದ್ದು, ನ್ಯಾಯಸಮ್ಮತವಾಗಿಲ್ಲ. ನಿಜವಾಗಿಯೂ ಸರ್ಕಾರಕ್ಕೆ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ ಇಡಬ್ಲ್ಯೂಎಸ್ ಮಾದರಿಯಲ್ಲಿ ಒಂಬತ್ತನೇ ಷೆಡ್ಯೂಲ್‌ಗೆ ಸೇರಿಸಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿತ್ತು. ಅದನ್ನು ಮಾಡದೆ ಚುನಾವಣಾ ಸಮಯದಲ್ಲಿ‌ ಆಸೆ ತೋರಿಸುವ ಬಿಜೆಪಿಯ ತಂತ್ರವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ’ ಎಂದು
ತಿಳಿಸಿದ್ದಾರೆ.

‘ಸಂವಿಧಾನ ತಿದ್ದುಪಡಿ ಮಾಡದೆ ಮೀಸಲಾತಿ ವರ್ಗೀಕರಣ ಆಗುವುದಿಲ್ಲ.ಇದನ್ನು ಡಬಲ್ ಎಂಜಿನ್ ಸರ್ಕಾರ ಹೇಗೆ ನಿರ್ವಹಿಸುತ್ತದೆ ನೋಡಬೇಕು. ಕೇವಲ ಚುನಾವಣಾ ತಂತ್ರವಾದರೆ ಈ ಸಮುದಾಯಗಳಿಗೆ ದೊಡ್ಡ ಮೋಸ ಆಗಲಿದೆ’ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಮತ್ತು ಕುಳುವ ಮಹಾಸಭಾಪ್ರತ್ಯೇಕವಾಗಿ ಪತ್ರಿಕಾ ಹೇಳಿಕೆ ಬಿಡುಗಡೆ
ಮಾಡಿದ್ದು, ‘ಕೇವಲ ಜನಸಂಖ್ಯೆ ಆಧರಿಸಿ ಪರಿಶಿಷ್ಟ ಜಾತಿಯನ್ನು 5 ಪಂಗಡಗಳಾಗಿ ವಿಂಗಡಿಸಿರುವುದು ಅವೈಜ್ಞಾನಿಕ. ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾದ ನಡೆ. ಅಸಂವಿಧಾನಿಕ ಶಿಫಾರಸಿನ ವಿರುದ್ಧ ನ್ಯಾಯಾಂಗ ಹೋರಾ‌ಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿವೆ.

ಬೆನ್ನಿಗೆ ಚೂರಿ ಹಾಕಿ ಒಡಕು ತರುವಂಥ ಕೆಲಸ: ಪ್ರಕಾಶ ರಾಠೋಡ್‌ ಕಿಡಿ

ಬೆಂಗಳೂರು: ‘ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿರುವ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ನಡೆ ಸಂವಿಧಾನ ವಿರೋಧಿಯಾಗಿದೆ. ಇದು ಪರಿಶಿಷ್ಟ ಜಾತಿಯಲ್ಲಿರುವ 99 ಸಮುದಾಯಗಳ ಬೆನ್ನಿಗೆ ಚೂರಿ ಹಾಕಿ ನಮ್ಮಲ್ಲಿಯೇ ಒಡಕು ತರುವಂಥ ಕೆಲಸ’ ಎಂದು ಕೆಪಿಸಿಸಿ ವಕ್ತಾರ, ವಿಧಾನ ಪರಿಷತ್‌ ಕಾಂಗ್ರೆಸ್‌ ಮುಖ್ಯ ಸಚೇತಕ ಪ್ರಕಾಶ ರಾಠೋಡ್‌ ಕಿಡಿಕಾರಿದ್ದಾರೆ.

‘ಪರಿಶಿಷ್ಟ ಜಾತಿಯಲ್ಲಿರುವ ಸಮಾನ ಅವಕಾಶ ವಂಚಿತ ಶೋಷಿತ ಸಮುದಾಯಗಳನ್ನು ಮರು ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಆದರೂ ರಾಜ್ಯ ಸರ್ಕಾರ ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಯ ಪಟ್ಟಿಯನ್ನು ತಿದ್ದಿ, ತೇಪೆ ಹಚ್ಚಿ, ಮರು ವರ್ಗೀಕರಿಸುತ್ತಿರುವುದು ಕಾರ್ಯಸಾಧುವಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’- ಸಿದ್ದರಾಮಯ್ಯ

ಬೆಂಗಳೂರು: ‘ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ ‘ಕನ್ನಡಿಯೊಳಗಿನ ಗಂಟು’ ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್‌ಗಳಿಗೆ ಜನ ಬಲಿಯಾಗಬಾರದು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

‘ಹಿಂದುಳಿದ ಜಾತಿ ಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ, ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ’ ಎಂದೂ ಅವರು ಹೇಳಿದ್ದಾರೆ.

‘ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯವರೆಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಮಾಣಿಕತೆಗೆ ಸಾಕ್ಷಿ. ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರೂ ಇದು ಸುಲಭಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಂಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.