ADVERTISEMENT

ಬೊಮ್ಮಾಯಿಗಾಗಲಿ, ಅವರ ಪುತ್ರನಿಗಾಗಲಿ ಸ್ಯಾಂಟ್ರೊ ರವಿ ಜತೆ ಸಂಬಂಧವಿಲ್ಲ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2023, 2:46 IST
Last Updated 8 ಜನವರಿ 2023, 2:46 IST
   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಲಿ, ಅವರ ಪುತ್ರ ಭರತ್‌ ಬೊಮ್ಮಾಯಿ ಅವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜತೆ ಸಂಬಂಧವಿಲ್ಲ ಎಂದು ಬಿಜೆಪಿ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದೆ.

ಹಲವು ಅಕ್ರಮಗಳ ಆರೋಪ ಹೊತ್ತಿರುವ ಸ್ಯಾಂಟ್ರೊ ರವಿ ಎಂಬಾತ ಬಿಜೆಪಿ ನಾಯಕರ ಜತೆಗೆ ತೆಗೆಸಿಕೊಂಡಿದ್ದಾನೆ ಎನ್ನಲಾದ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆ ಮೂಲಕ ಶನಿವಾರ ಸ್ಪಷ್ಟನೆ ಹೊರಬಿದ್ದಿದೆ.

‘ಮುಖ್ಯಮಂತ್ರಿಗಳ ಮನೆಗೆ ಅನೇಕರು ಬಂದು ಹೋಗುತ್ತಾರೆ. ಅಲ್ಲಿ ಬಂದವರು ಸಿಎಂ ಹಾಗೂ ಅವರ ಕುಟುಂಬದ ಜೊತೆ ಫೋಟೋ ತೆಗೆಸಿಕೊಂಡು ಹೋಗುವುದು ಸಾಮಾನ್ಯ. ಸ್ಯಾಂಟ್ರೊ ರವಿ ಎಂಬಾತ ಕೂಡ ಅದೇ ರೀತಿ ಫೋಟೊ ತೆಗೆಸಿಕೊಂಡಿರಬಹುದು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗಾಗಲಿ, ಅವರ ಪುತ್ರ ಭರತ್ ಬೊಮ್ಮಾಯಿ ಅವರಿಗಾಗಲಿ ಸ್ಯಾಂಟ್ರೊ ರವಿ ಎಂಬಾತನ ಜೊತೆ ಯಾವುದೇ ಸಂಬಂಧವಿರುವುದಿಲ್ಲ. ವಿರೋಧ ಪಕ್ಷಗಳ ಸುಳ್ಳಿನ ಕಾರ್ಖಾನೆಗಳಲ್ಲಿ ತಯಾರಾದ ಪ್ರಾಡಕ್ಟ್‌ಗಳಿವು’ ಎಂದು ಟ್ವೀಟ್‌ ಮಾಡಲಾಗಿದೆ.

ADVERTISEMENT

ಕಾಂಗ್ರೆಸ್‌ನಿಂದ ನಿರಂತರ ಟೀಕೆ
ಸಚಿವ ಸೋಮಶೇಖರ್ ವರ್ಗಾವಣೆಗೆ ಸಂಬಂಧಿಸಿದಂತೆ ಸ್ಯಾಂಟ್ರೊ ರವಿಯ ಜತೆ ಮಾತಾಡಿದ್ದಾರೆ. ಎಲ್ಲಾ ಸಚಿವರೊಂದಿಗೆ ಆತ ನಿಕಟ ಸಂಪರ್ಕದಲ್ಲಿದ್ದಾನೆ. ಸೋಮಶೇಖರ್‌ ಅವರೇ, ನಿಮ್ಮ ರವಿಯ ಈ ಬಂಧ ಬಾಂಬೆಯ ಅನುಬಂಧವೇ? ಸ್ಯಾಂಟ್ರೊ ರವಿ ಬಿಜೆಪಿ ಸರ್ಕಾರದ ಚೀಫ್ ಬ್ರೋಕರ್ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ ಬೊಮ್ಮಾಯಿ ಅವರೇ? ಎಂದು ಪ್ರಶ್ನೆ ಮಾಡಿರುವ ಕಾಂಗ್ರೆಸ್, ವಿಡಿಯೊವೊಂದನ್ನು ಹಂಚಿಕೊಂಡಿದೆ. ಅದರಲ್ಲಿ ಸ್ಯಾಂಟ್ರೊ ರವಿ ಎಂಬಾತ ಸೋಮಶೇಖರ್‌ ಜತೆಗೆ ಸಮಾಲೋಚನೆ ಮಾಡಿರುತ್ತಿರುವ ಸನ್ನಿವೇಶಗಳಿವೆ.

ಸ್ಯಾಂಟ್ರೊ ರವಿ ನನಗೆ ತಿಳಿದೇ ಇಲ್ಲ ಎಂದಿದ್ದ ಸೋಮಶೇಖರ್‌ ಅವರ ಅಸಲಿತನ ಬಯಲಾಗಿದೆ. ಸಿಎಂ ಬೊಮ್ಮಾಯಿ ಅವರೂ ಆತ ನನಗೆ ತಿಳಿದೇ ಇಲ್ಲ ಎಂದಿದ್ದಾರೆ. ಅವರ ಅಸಲಿಯತ್ತು ಬಯಲಾದರೆ ಯಾವ ಸಮಜಾಯಿಷಿ ಕೊಡಬಲ್ಲರು? ಸ್ಯಾಂಟ್ರೊ ರವಿಯನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಲ್ಲಿ ಪ್ರಕರಣ ದಾಖಲಿಸದೆ ಇನ್ಯಾವ ಆಧಾರದಲ್ಲಿ ತನಿಖೆ ಮಾಡುತ್ತಿದ್ದೀರಿ? ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ಇದುವರೆಗೂ ಚೀಫ್ ಮಿನಿಸ್ಟರ್, ಚೀಫ್ ಸಕ್ರೆಟರಿ ಎಂಬ ಸಾಂವಿಧಾನಿಕ ಹುದ್ದೆಗಳಿದ್ದವು. ಬಿಜೆಪಿ ಆಡಳಿತಕ್ಕೆ ಬಂದಮೇಲೆ ಚೀಫ್ ಬ್ರೋಕರ್ ಎಂಬ ಹೊಸ ಹುದ್ದೆ ಸೃಷ್ಟಿಸಿ ಅದಕ್ಕೆ ಸ್ಯಾಂಟ್ರೊ ರವಿಯನ್ನು ನೇಮಕ ಮಾಡಿದೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಸರ್ಕಾರದ ‘ಚೀಫ್ ಬ್ರೋಕರ್’ ಸ್ಯಾಂಟ್ರೊ ರವಿಯೊಂದಿಗೆ ಉನ್ನತ ಅಧಿಕಾರಿಗಳು, ಸಚಿವರು, ಮುಖ್ಯಮಂತ್ರಿ ಎಲ್ಲರೂ ನೇರಾನೇರ ಸಂಪರ್ಕದಲ್ಲಿದ್ದಾರೆ. ಇಡೀ ಸರ್ಕಾರವೇ ಈತನ ಕೈಯ್ಯೊಳಗಿದೆ. ಆತನೊಂದಿಗೆ ಬಿಜೆಪಿ ನಾಯಕರ ಚಾಟಿಂಗು, ಮೀಟಿಂಗು, ಡೇಟಿಂಗು ಎಲ್ಲವೂ ಬಯಲಾಗಿದೆ. ತನನ್ನು ಉನ್ನತ ತನಿಖೆಗೊಳಪಡಿಸಿದರೆ ಇಡೀ ಸರ್ಕಾರವೇ ಜೈಲು ಸೇರುವುದು ನಿಶ್ಚಿತ ಎಂದು ಮತ್ತೊಂದು ಟ್ವೀಟ್‌ನಲ್ಲಿ ಗೇಲಿ ಮಾಡಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.