ADVERTISEMENT

ಸಿಆರ್‌ಜೆಡ್‌ ವಿಸ್ತರಣೆಗೆ ರಾಜ್ಯದ ಒತ್ತಡ; ಕೇಂದ್ರ ಸಚಿವರ ಭೇಟಿಯಾದ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 4:44 IST
Last Updated 26 ಜುಲೈ 2022, 4:44 IST
ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಬಂದರು, ಹಡಗು, ಜಲಸಾರಿಗೆ ಮತ್ತು ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿಯಾದರು.
ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಬಂದರು, ಹಡಗು, ಜಲಸಾರಿಗೆ ಮತ್ತು ಆಯುಷ್ ಖಾತೆ ಸಚಿವ ಸರ್ಬಾನಂದ ಸೋನೋವಾಲ್ ಅವರನ್ನು ಭೇಟಿಯಾದರು.   

ನವದೆಹಲಿ:ಕರ್ನಾಟಕದಕರಾವಳಿ ನಿಯಂತ್ರಣಾ ವಲಯವನ್ನು (ಸಿಆರ್‌ಜೆಡ್‌) ವಿಸ್ತರಣೆ ಮಾಡಲು ಪರಿಸರ ಸಚಿವಾಲಯದ ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದ್ದು, ಕೇಂದ್ರ ಪರಿಸರ ಸಚಿವಾಲಯದ ಅನುಮೋದನೆ ಸಿಕ್ಕಿದರೆ ಕರಾವಳಿ ಪ್ರದೇಶ ಸಮಗ್ರ ಅಭಿವೃದ್ಧಿ ಹೊಂದಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೇಂದ್ರ ಸಚಿವರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಸಿಆರ್‌ಜೆಡ್‌ ವಿಸ್ತರಣೆಗೆ ಅನುಮತಿ ನೀಡಿರುವುದರಿಂದ ಹೋಟೆಲ್ ಉದ್ಯಮ, ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗಿದೆ. ಇದೇ ರೀತಿ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸಿಆರ್‌ಜೆಡ್‌ ವಿಸ್ತರಣೆಗೆ ಗಂಭೀರ ಪ್ರಯತ್ನಗಳನ್ನು ಮಾಡಲಾಗಿದ್ದು, ಚೆನ್ನೈನ ಪ್ರಾದೇಶಿಕ ಕಚೇರಿಯಿಂದ ಅನುಮತಿ ದೊರೆತಿದೆ. ಇದರಿಂದ ಕರ್ನಾಟಕದ 330 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಅಭಿವೃದ್ಧಿಯ ಜೊತೆ, ಆರ್ಥಿಕತೆ, ಪ್ರವಾಸೋದ್ಯಮ, ಮೀನುಗಾರಿಕೆ ಅಭಿವೃದ್ಧಿಗೊಳ್ಳಲಿದೆ’ ಎಂದರು.

ADVERTISEMENT

ಉತ್ತರ ಕರ್ನಾಟಕದಲ್ಲಿ ಐದು ವರ್ತುಲ ರಸ್ತೆ: ರಾಯಚೂರು, ಕೊಪ್ಪಳ, ಕಲಬುರ್ಗಿ, ಬೆಳಗಾವಿ ಹಾಗೂ ಗದಗ ನಗರಗಳಲ್ಲಿ ವರ್ತುಲ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರ ಜತೆಗೆ ಸಮಾಲೋಚನೆ ನಡೆಸಲಾಗಿದೆ. ಈ ಯೋಜನೆಗೆ ಸಚಿವರು ಅನುಮೋದನೆ ನೀಡಿದ್ದಾರೆ ಎಂದರು.

‘ಕೇಂದ್ರ ಬಂದರು ಮತ್ತು ಜಲಸಾರಿಗೆ ಸಚಿವರನ್ನು ಭೇಟಿಯಾಗಿ ರಾಜ್ಯದ ಹಲವಾರು ಬಾಕಿ ಇದ್ದ ಪ್ರಸ್ತಾವನೆಗಳ ಮಂಜೂರಾತಿ ಬಗ್ಗೆ ಚರ್ಚಿಸಲಾಗಿದೆ. ₹1800 ಕೋಟಿ ಮೊತ್ತದ ಒಟ್ಟು 27 ಯೋಜನೆಗಳನ್ನು ಸಾಗರಮಾಲಾ ಎರಡನೇ ಹಂತದ ಯೋಜನೆಯಡಿ ಜಾರಿಗೊಳಿಸಲಾಗುತ್ತದೆ. ಇದರಲ್ಲಿ 10 ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. 10 ಯೋಜನೆಗಳಿಗೆ ಕೇಂದ್ರ ಸಚಿವರು ಸ್ಪಷ್ಟೀಕರಣ ಕೇಳಿದ್ದಾರೆ. ಕೆಲವು ಪ್ರಸ್ತಾ ವನೆಗಳನ್ನು ಬದಲಾವಣೆ ಮಾಡಿ ಕಳುಹಿಸಲು ಸೂಚಿಸಿದ್ದಾರೆ’ ಎಂದು ಹೇಳಿದರು.

ಕಸ್ತೂರಿರಂಗನ್‌ ವರದಿ: ಉನ್ನತ ಸಮಿತಿ ರಚನೆ
ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದ ನಿಯೋಗ ಭೇಟಿ ಮಾಡಿ ಕಸ್ತೂರಿರಂಗನ್‌ ವರದಿ ಬಗ್ಗೆ ನಿಲುವನ್ನು ತಿಳಿಸಿತು.

‘ಮಾಧವ ಗಾಡ್ಗೀಳ್‌ ಸಮಿತಿಯನ್ನು ಎಲ್ಲ ರಾಜ್ಯಗಳೂ ವಿರೋಧಿಸಿದ್ದವು. ನಂತರ ಕಸ್ತೂರಿರಂಗನ್‌ ಸಮಿತಿ ರಚಿಸಲಾಯಿತು. ಈ ಸಮಿತಿಯು ಯಾವುದೇ ಭೂ ಸಮೀಕ್ಷೆ ಮಾಡದೇ, ಕೇವಲ ಉಪಗ್ರಹ ಆಧಾರಿತ ಸಮೀಕ್ಷೆ ನಡೆಸಿ ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಶಿಫಾರಸು ಮಾಡಿದೆ. ಪಶ್ಚಿಮ ಘಟ್ಟದಲ್ಲಿಕಾಫಿ, ಅಡಿಕೆ , ತೆಂಗು, ರಬ್ಬರ್ ತೋಟಗಳಿದ್ದು, ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೇ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದ’ ಎಂದರು.

‘ರಾಜ್ಯದ ಜೀವ ವೈವಿಧ್ಯ ನೀತಿಯ ಪ್ರಕಾರ, ವರದಿ ತಯಾರಿಸುವಾಗ ಸ್ಥಳೀಯ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಭಿಪ್ರಾಯ ಪಡೆಯಬೇಕಿತ್ತು. ಒಟ್ಟಾರೆ ಸ್ಥಳೀಯ ಜನರ ಅಭಿಪ್ರಾಯ ಪಡೆಯದೆಯೇ ಕಸ್ತೂರಿ ರಂಗನ್ ವರದಿ ಸಿದ್ಧಪಡಿಸಲಾಗಿದೆ’ ಎಂದರು.

ವರದಿ ಬಗ್ಗೆ ಸಾವಿರಾರು ಆಕ್ಷೇಪಣೆಗಳು ಬಂದಿವೆ. ಇವುಗಳನ್ನು ಪರಿಶೀಲಿಸಿ ವರದಿ ನೀಡಲು ಕೇಂದ್ರ ಸರ್ಕಾರವು ನಿವೃತ್ತ ಐಎಫ್‌ಎಸ್‌ ಅಧಿಕಾರಿ ಸಂಜಯ್‌ ಕುಮಾರ್ ನೇತೃತ್ವದ ಸಮಿತಿ ರಚಿಸಿದ್ದು, ವರ್ಷದಲ್ಲಿ ಸಮಿತಿ ವರದಿ ನೀಡಲಿದೆ. ಈ ಸಮಿತಿಗೆ ರಾಜ್ಯದಲ್ಲಿನ ವಾಸ್ತವಾಂಶಗಳ ಮಾಹಿತಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ. ಸ್ಥಳೀಯರ ಅಹವಾಲುಗಳನ್ನು ಸಮಿತಿ ಆಲಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.