ADVERTISEMENT

ಬುದ್ಧ, ಬಸವ, ಅಂಬೇಡ್ಕರ್ ಕಾಲಾತೀತರು: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 19:39 IST
Last Updated 25 ನವೆಂಬರ್ 2021, 19:39 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ‘ಬುದ್ಧ, ಬಸವ, ಅಂಬೇಡ್ಕರ್, ಮಹಾವೀರರು ಕಾಲಾತೀತರು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಶ್ವ ಬುದ್ಧ ಧಮ್ಮ ಸಂಘ ಹಾಗೂ ನಾಗಸೇನಾ ಬುದ್ಧ ವಿಹಾರ ವತಿಯಿಂದ 72‌ನೇ ಸಂವಿಧಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಬೌದ್ಧ ದಾಂಮಾಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.

‌‘ಅಂಬೇಡ್ಕರ್ ಅವರು ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಇಂದು ಸ್ವತಂತ್ರವಾಗಿ ವಿಚಾರಗಳ ಅಭಿವ್ಯಕ್ತಿಸುತ್ತಿರುವುದು, ಸರ್ಕಾರಗಳನ್ನು ಆಯ್ಕೆ ಮಾಡುವ ಹಕ್ಕು ಕೊಟ್ಟಿದ್ದು ಅಂಬೇಡ್ಕರ್ ಎನ್ನುವುದನ್ನು ಯಾರೂ ಮರೆಯಬಾರದು’ ಎಂದರು.

ADVERTISEMENT

‘ನಮಗೆ ರಾಜಕೀಯ, ಸ್ವಾತಂತ್ರ್ಯ ದೊರಕಿದೆ. ಆದರೆ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವತಂತ್ರ ದೊರಕುವವರೆಗೂ ನ್ಯಾಯ ಸಿಗುವುದಿಲ್ಲ. ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣದ ಸಾಧನೆಯನ್ನು ಸಮಾಜ ಸರ್ಕಾರ ಎರಡೂ ಮಾಡಬೇಕಿದೆ. ಈ ದಿಕ್ಕಿನಲ್ಲಿ ದಾಪುಗಾಲಿನ ಹೆಜ್ಜೆಗಳನ್ನಿಡಬೇಕಿದೆ. ಈ ಕೆಲಸ ಕೇವಲ ಮಾತಿನಿಂದಲ್ಲ, ಕೃತಿಯಲ್ಲಿ ಆಗಬೇಕು. ಇಂದಿನ ಅಗತ್ಯಗಳಿಗೆ ತಕ್ಕಂತೆ ಯುವಕರನ್ನು ಸಿದ್ಧಗೊಳಿಸಬೇಕು. ಹೊಸ ಯೋಜನೆಗಳನ್ನು ಜಾರಿಗೆ ತಂದು ಈ ಸಮುದಾಯದ ಮಕ್ಕಳು ವಿಶ್ವಮಟ್ಟದಲ್ಲಿ ಎಲ್ಲರೊಂದಿಗೆ ಪೈಪೋಟಿ ಮಾಡಲು ಸಿದ್ಧಗೊಳಿಸಿ, ಆರ್ಥಿಕತೆ, ಕೌಶಲ, ಉದ್ಯೋಗಾವಕಾಶಗಳನ್ನು ಸೃಜಿಸಲಾಗುವುದು’ ಎಂದರು.

‘ಅಮೃತ ಕೌಶಲ’ ಯೋಜನೆ: ಖಾಸಗಿ ವಲಯದಲ್ಲಿ ಉದ್ಯೋಗ ದೊರಕಲು ಅಗತ್ಯವಿರುವ ಕೌಶಲ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ. ಎಸ್‌ಸಿ, ಎಸ್‌ಸಿ ಸಮುದಾಯಕ್ಕೆ ಸೇರಿದ 75 ಸಾವಿರ ವಿದ್ಯಾರ್ಥಿಗಳು ಒಂದೇ ವರ್ಷದಲ್ಲಿ ಕೌಶಲ ಪಡೆದು ಉದ್ಯೋಗಸ್ಥರಾಗಲು ‘ಅಮೃತ ಕೌಶಲ’ ಯೋಜನೆ ಘೋಷಿಸಲಾಗಿದೆ. ಈಗಾಗಲೇ 35 ಸಾವಿರ ಮಕ್ಕಳು ನೋಂದಣಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದ ಒಟ್ಟು ತಲವಾರು ಆದಾಯದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರು ಪಾಲ್ಗೊಳ್ಳಬೇಕು. ಹೊಲ, ಮನೆಗಳಲ್ಲಿ ಕೆಲಸ ಮಾಡುವ ಈ ಸಮುದಾಯದ ಹೆಣ್ಣುಮಕ್ಕಳಿಗೆ ಆರ್ಥಿಕ ನೆರವು ನೀಡುವ ವಿಶೇಷ ಕಾರ್ಯಕ್ರಮವನ್ನು ಸರ್ಕಾರ ರೂಪಿಸಲಿದೆ‘ ಎಂದರು.

ಎಂ ವೆಂಕಟಸ್ವಾಮಿ, ಛಲವಾದಿ ನಾರಾಯಣಸ್ವಾಮಿ, ವಿವಿಧ ಮಠಾಧಿಪತಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.