ADVERTISEMENT

ಎಲೆಕ್ಟ್ರಾನಿಕ್ಸ್‌‌ ಉದ್ಯಮಕ್ಕೆ ಕೊಡುಗೆ: ಹೊಸ ಐಟಿ ನೀತಿಗೆ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 12:11 IST
Last Updated 3 ಸೆಪ್ಟೆಂಬರ್ 2020, 12:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹೊಸ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ, ಎಲೆಕ್ಟ್ರಾನಿಕ್ಸ್‌ ಮತ್ತು ಸೆಮಿಕಂಡಕ್ಟರ್‌ಗಳ ಉತ್ಪಾದನಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ರಿಯಾಯ್ತಿಗಳು, ಪ್ರೋತ್ಸಾಹ ಧನ ಪ್ರಸ್ತಾವನೆ ಒಳಗೊಂಡಿರುವ ವಿಶೇಷ ಯೋಜನೆಯೊಂದಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಐಟಿ ಕಾರ್ಯನೀತಿ 2020–25 ರ ಅವಧಿಯಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದ್ದು, 3 ಟ್ರಿಲಿಯನ್‌ ಡಾಲರ್‌ ಡಿಜಿಟಲ್‌ ಆರ್ಥಿಕತೆಯಲ್ಲಿ ಶೇ 30 ರಷ್ಟು ಕೊಡುಗೆ ಕರ್ನಾಟಕದ್ದೇ ಆಗಿರಬೇಕು ಮತ್ತು ಸೈಬರ್‌ ಸೆಕ್ಯುರಿಟಿಯ ಮಾಹಿತಿಯನ್ನು ನೀತಿ ಒಳಗೊಂಡಿದೆ.

ADVERTISEMENT

ಬಂಡವಾಳ ಹೂಡಿಕೆ ಸಬ್ಸಿಡಿಯಡಿ ಭೂಮಿ ಖರೀದಿ ಶೇ 25 ಮತ್ತು ಘಟಕ ಹಾಗೂ ಯಂತ್ರೋಪಕರಣಗಳ ಖರೀದಿಗೆ ಶೇ 20 ರಷ್ಟು ಸಬ್ಸಿಡಿ ನೀಡಲಾಗುವುದು.

ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕವನ್ನು ಶೇ 100 ರಷ್ಟು ಹಿಂದಿರುಗಿಸಲಾಗುವುದು. ಭೂಪರಿವರ್ತನೆ ಶುಲ್ಕ ಶೇ 100 ರಷ್ಟು ಹಿಂದಿರಿಗಿಸಲಾಗುವುದು. ವಿದ್ಯುತ್ ದರದಲ್ಲಿ ₹1 ಪ್ರತಿ ಯುನಿಟ್‌ ಮೇಲೆ ರಿಯಾಯ್ತಿ, ಉದ್ಯಮ ತಯಾರಿಕೆ ಆರಂಭಿಸಿದ ದಿನದಿಂದ 5 ವರ್ಷಗಳವರೆಗೆ ಈ ಪ್ರಯೋಜನ ನೀಡಲಾಗುವುದು. ವಿದ್ಯುತ್ ಸುಂಕ ತ್ಪಾದನೆ ಆರಂಭಿಸಿದ ದಿನದಿಂದ 5 ವರ್ಷಗಳವರೆಗೆ ಶೇ 100 ರಷ್ಟು ವಿದ್ಯುತ್‌ ಸುಂಕ ವಿನಾಯ್ತಿ ನೀಡಲಾಗುವುದು ಎಂದು ಅವರು ಹೇಳಿದರು.

ಬೆಂಗಳೂರಿಗೆ ಅನ್ವಯವಿಲ್ಲ: ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭೂಮಿ ಖರೀದಿಗೆ ಶೇ 25 ರ ಪ್ರೋತ್ಸಾಹ ಧನ ಅನ್ವಯವಾಗುವುದಿಲ್ಲ. ಇತರ ಜಿಲ್ಲೆಗಳ ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಈ ಉದ್ಯಮಗಳು ನೆಲೆಗೊಳ್ಳಬೇಕು ಎಂಬ ಕಾರಣದಿಂದ ಇತರ ಜಿಲ್ಲೆಗಳಲ್ಲಿ ಪ್ರೋತ್ಸಾಹ ಧನ ನೀಡಲಾಗುವುದು.

ಇತರ ಜಿಲ್ಲೆಗಳಲ್ಲಿ 50 ಎಕರೆಗಳವರೆಗೆ ಭೂಮಿ ಖರೀದಿ ಮಾಡಿ ಕೈಗಾರಿಕೆ ಸ್ಥಾಪಿಸುವವರಿಗೆ ಈ ಪ್ರೋತ್ಸಾಹ ಧನ ಸಿಗುತ್ತದೆ. ಕೆಐಎಡಿಬಿ ಅಥವಾ ಕೆಎಸ್‌ಎಸ್‌ಐಡಿಸಿಯಿಂದ ಭೂಮಿ ಖರೀದಿಸಿದರೆ ಭೂಮಿಯ ಮಾರ್ಗಸೂಚಿ ದರ ಅಥವಾ ಭೂಮಿಯ ಖರೀದಿ ದರದ ಶೇ 25 ರಷ್ಟು ರಿಯಾಯ್ತಿಯೂ ಸಿಗುತ್ತದೆ. ಉತ್ಪನ್ನಗಳ ವಹಿವಾಟಿನ ಮೇಲೂ ಶೇ 1 ರಷ್ಟು ರಿಯಾಯಿತಿ ಎಂದರು.

ಸುಮಾರು ₹10 ಕೋಟಿಯವರೆಗೆ ಸಬ್ಸಿಡಿ ನೀಡಲು ಅವಕಾಶ ಇದೆ. ಸುಮಾರು 25 ರಿಂದ 30 ಲಕ್ಷ ಉದ್ಯೋಗಗಳ ಸೃಷ್ಟಿ ಆಗುವ ನಿರೀಕ್ಷೆ ಇದೆ ಎಂದು ಮಾಧುಸ್ವಾಮಿ ಹೇಳಿದರು.

ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೈಗಾರಿಕೆ ಸ್ಥಾಪನೆ ಆಗಬೇಕು ಎಂಬ ಉದ್ದೇಶದಿಂದ ಹೆಚ್ಚಿನ ರಿಯಾಯ್ತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.