ADVERTISEMENT

ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆಗೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 18:38 IST
Last Updated 14 ಜುಲೈ 2021, 18:38 IST
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಕರ್ನಾಟಕ ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆ’ಯ ಕೈಪಿಡಿ ಬಿಡುಗಡೆ ಮಾಡಿದರು. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದ್ದರು
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಕರ್ನಾಟಕ ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆ’ಯ ಕೈಪಿಡಿ ಬಿಡುಗಡೆ ಮಾಡಿದರು. ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಇದ್ದರು   

ಬೆಂಗಳೂರು: ನಗರಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸಾರಿಗೆ ಇಲಾಖೆ ರೂಪಿಸಿರುವ ವಿದ್ಯುತ್‌ ಬೈಕ್‌ ಟ್ಯಾಕ್ಸಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಬುಧವಾರ ಚಾಲನೆ ನೀಡಿದರು.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯುತ್‌ ಬೈಕ್‌ ಕೈಪಿಡಿ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಯೋಜನೆಯು ಇಂಧನ ಉಳಿತಾಯ, ಪರಿಸರ ಸ್ನೇಹಿ ವಾತಾವರಣ ನಿರ್ಮಾಣ, ಪ್ರಯಾಣಿಕರು ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಡುವೆ ಸಂಪರ್ಕ ಕಲ್ಪಿಸುವುದಕ್ಕೆ ನೆರವಾಗಲಿದೆ’ ಎಂದರು.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬಸ್‌, ರೈಲು ಮತ್ತು ಮೆಟ್ರೊ ರೈಲು ಸೇವೆಗಳ ಬಳಕೆದಾರರಿಗೆ ವಿದ್ಯುತ್‌ ಬೈಕ್ ಟ್ಯಾಕ್ಸಿ ಯೋಜನೆಯಿಂದ ಅನುಕೂಲವಾಗಲಿದೆ. ಕಂಪನಿಗಳು, ಪಾಲುದಾರಿಕೆ ಕಂಪನಿಗಳು ಮತ್ತು ವಿದ್ಯುತ್ ಚಾಲಿತ ಬೈಕ್‌ ಹೊಂದಿರುವ ವ್ಯಕ್ತಿಗಳೂ ಟ್ಯಾಕ್ಸಿ ಸೇವೆ ನೀಡಲು ಅವಕಾಶವಿದೆ. ನೋಂದಣಿ ಶುಲ್ಕ, ತೆರಿಗೆಯಲ್ಲಿ ರಿಯಾಯಿತಿ ನೀಡಲಾಗುವುದು. ವಿದ್ಯುತ್‌ ಚಾಲಿತ ಬೈಕ್‌ಗಳ ಉತ್ಪಾದಕರಿಗೆ ಸಹಾಯಧನವನ್ನೂ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್ ಉಪಸ್ಥಿತರಿದ್ದರು.

ಯೋಜನೆಯಲ್ಲಿ ಏನಿದೆ?: ನಗರ ಪ್ರದೇಶಗಳಲ್ಲಿ ನೋಂದಾಯಿತ ವಿದ್ಯುತ್‌ ಚಾಲಿತ ಬೈಕ್‌ಗಳನ್ನು ಬಳಸಿಕೊಂಡು ಟ್ಯಾಕ್ಸಿ ಸೇವೆ ನೀಡಲು ಅವಕಾಶ ದೊರೆಯಲಿದೆ. 10 ಕಿ.ಮೀ. ದೂರದವರೆಗೆ ಗ್ರಾಹಕರು ಬೈಕ್‌ ಟ್ಯಾಕ್ಸಿ ಕಾಯ್ದಿರಿಸಿ, ಬಳಸಬಹುದು. 5 ಕಿ.ಮೀ. ಮತ್ತು 10 ಕಿ.ಮೀ. ಅಂತರಕ್ಕೆ ಎರಡು ಹಂತಗಳಲ್ಲಿ ದರ ನಿಗದಿ ಮಾಡಲಾಗುತ್ತದೆ.

ಒಂದು ಬೈಕ್‌ ಟ್ಯಾಕ್ಸಿಯಲ್ಲಿ ಸವಾರನ ಜತೆಗೆ ಒಬ್ಬ ಹಿಂಬದಿಯ ಸವಾರನನ್ನು ಮಾತ್ರ ಕರೆದೊಯ್ಯಲು ಅವಕಾಶವಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಈ ಸೇವೆ ಬಳಸುವಂತಿಲ್ಲ. 50ಕ್ಕಿಂತ ಹೆಚ್ಚು ವಿದ್ಯುತ್ ಬೈಕ್‌ ಟ್ಯಾಕ್ಸಿ ಹೊಂದಿರುವ ಕಂಪನಿಗಳು ವಾಹನದಲ್ಲಿ ಜಿಪಿಎಸ್‌ ವ್ಯವಸ್ಥೆ ಅಳವಡಿಸುವುದು ಕಡ್ಡಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.