ಮುಖ್ಯಮಂತ್ರಿ ಸಿದ್ದರಾಮಯ್ಯ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಜಾರಿಗೆ ತರಬೇಕು ಮತ್ತು ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 75ಕ್ಕೆ ಹೆಚ್ಚಿಸಬೇಕು ಎಂದು ಹಿಂದುಳಿದ ವರ್ಗಗಳ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿವೆ.
ಮುಖ್ಯಮಂತ್ರಿ ಅವರು ಹಿಂದುಳಿದ ವರ್ಗಗಳ ಪ್ರತಿನಿಧಿಗಳ ಜತೆ ಮಂಗಳವಾರ ನಡೆಸಿದ ಬಜೆಟ್ ಪೂರ್ವಬಾವಿ ಸಭೆಯಲ್ಲಿ, ಜಾತಿ ಗಣತಿ ಜಾರಿಗೆ ಒತ್ತಾಯ ಕೇಳಿಬಂತು. ಆ ಬಗ್ಗೆ ಭರವಸೆ ನೀಡಿದ ಸಿದ್ದರಾಮಯ್ಯ, ‘ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ’ ಎಂದರು.
‘ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿದ್ದು, ಸರ್ಕಾರ ಅದನ್ನು ಸ್ವೀಕರಿಸಿದೆ ಮತ್ತು ಅದನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಅನುಷ್ಠಾನಕ್ಕೆ ತರುತ್ತೇವೆ’ ಎಂದರು.
ಒಟ್ಟು ಮೀಸಲಾತಿಯನ್ನು ಶೇ 75ರಷ್ಟಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ಒಟ್ಟು ಮೀಸಲಾತಿಯ ಪ್ರಮಾಣ ಶೇ 50ನ್ನು ಮೀರಬಾರದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಿತಿ ಹೇರಿದೆ. ಹಾಗೂ ಮೀಸಲಾತಿಯನ್ನು ಶೇ 75ಕ್ಕೆ ಏರಿಸುವ ಸಂಬಂಧ ಇರುವ ತೊಡಕುಗಳನ್ನು ಸಮುದಾಯದ ನಾಯಕರಿಗೆ ವಿವರಿಸಿದರು.
‘ಅಲೆಮಾರಿ ಜನಾಂಗಗಳಿಗೆ ಉಚಿತ ಶಿಕ್ಷಣ ಒದಗಿಸಲು ಸರ್ಕಾರ ಬದ್ಧವಾಗಿದೆ. ಹೀಗಾಗಿಯೇ ಶಿಕ್ಷಣದ ಹಕ್ಕಿನಲ್ಲಿ (ಆರ್‌ಟಿಇ) ಅಡಿ ಎಲ್ಲ ಸಮುದಾಯಗಳಿಗೂ ಉಚಿತ ಶಿಕ್ಷಣದ ಅವಕಾಶ ಮಾಡಿಕೊಟ್ಟಿದೆ. ಈ ಬಾರಿಯ ಬಜೆಟ್‌ನಲ್ಲಿ ಈ ಜನಾಂಗಗಳ ಬಗ್ಗೆ ವಿಶೇಷ ಗಮನಹರಿಸುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.
ಸರ್ಕಾರಿ ಕಾಮಗಾರಿಗಳಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಅನ್ವಯವಾಗುವ ವೆಚ್ಚ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.