ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಳಿವು–ಉಳಿವಿನ ಸಮಾವೇಶವನ್ನು ಮೈಸೂರಿನಲ್ಲಿ ನಡೆಸಲಾಗುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಮಾತು ಆ ಪಕ್ಷದಲ್ಲೇ ಕೇಳಿ ಬರುತ್ತಿದ್ದ ಕಾರಣ ಆರಂಭದಿಂದಲೇ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತಲೇ ಇದೆ. ಈ ಸಮಾವೇಶದಿಂದ ಜನರಿಗೆ ಯಾವುದೇ ಉಪಯೋಗವಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, 2,500 ರೈತರ ಆತ್ಮಹತ್ಯೆ, 1,200 ನವಜಾತ ಶಿಶುಗಳ ಸಾವು, ಬಾಣಂತಿಯರ ಸಾವು, ಹತ್ತಕ್ಕೂ ಹೆಚ್ಚು ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಆತ್ಮಹತ್ಯೆ, ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಿಂದ 11 ಮಂದಿ ಸಾವು. ಇಂತಹ ಘಟನೆಗಳನ್ನು ಸಂಭ್ರಮಿಸಲು ಸಮಾವೇಶ ಮಾಡಲಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದರು.
ಆರ್‌ಸಿಬಿ ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆದಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಈ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದರು. ಸಿಐಡಿ ಹಾಗೂ ನ್ಯಾ. ಮೈಕಲ್ ಕುನ್ಹಾ ನೇತೃತ್ವದ ತನಿಖಾ ವರದಿಯಲ್ಲಿ ಸರ್ಕಾರದ ತಪ್ಪಿನ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಪೊಲೀಸರ ಮೇಲೆ ಸಂಪೂರ್ಣ ಆರೋಪ ಹೊರಿಸಲಾಗಿದೆ. ಇಂತಹ ಸಮಯದಲ್ಲಿ ಸಮಾವೇಶದ ಅಗತ್ಯವಿತ್ತೆ? ಇದೇ ರೀತಿ ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಸಮಾವೇಶ ನಡೆಸಿದರೆ ಆಗ ಯಾರ ಬಲ ಹೆಚ್ಚಿದೆ ಎಂದು ತೀರ್ಮಾನಿಸಬಹುದು. ಇಲ್ಲಿ ಪರಸ್ಪರರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ ಎಂದು ಅಶೋಕ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.