ADVERTISEMENT

ಕುತೂಹಲ ಮೂಡಿಸಿದ ಸಿದ್ದರಾಮಯ್ಯ– ಸಿ.ಎಂ.ಇಬ್ರಾಹಿಂ ಭೇಟಿ

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ‘ಕೈ’ಯಲ್ಲಿ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 5:08 IST
Last Updated 13 ಡಿಸೆಂಬರ್ 2021, 5:08 IST
ಸಿದ್ದರಾಮಯ್ಯ - ಸಿ.ಎಂ.ಇಬ್ರಾಹಿಂ
ಸಿದ್ದರಾಮಯ್ಯ - ಸಿ.ಎಂ.ಇಬ್ರಾಹಿಂ   

ಬೆಂಗಳೂರು:ವಿಧಾನಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಮುಗಿಯುತ್ತಿದ್ದಂತೆಯೇ, ಪರಿಷತ್‌ನ ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ಆರಂಭವಾಗಿದೆ. ಆ ಸ್ಥಾನವನ್ನು ತನಗೆ ನೀಡುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬಳಿ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ಎಸ್‌.ಆರ್‌.ಪಾಟೀಲ ಅವರಿಂದ ತೆರವಾಗುವ ಸ್ಥಾನಕ್ಕೆ ಹೊಸಬರನ್ನು ಕಾಂಗ್ರೆಸ್‌ ನೇಮಕ ಮಾಡಬೇಕಿದೆ. ಪಾಟೀಲ ಅವರಿಗೆ ಚುನಾವಣೆಯಲ್ಲಿ ಟಿಕೆಟ್‌ ಸಿಕ್ಕಿಲ್ಲ. ಅವರ ಅವಧಿ ಜ.5 ಕ್ಕೆ ಕೊನೆ ಆಗಲಿದೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಬಿ.ಕೆ. ಹರಿಪ್ರಸಾದ್‌, ಆರ್‌.ಬಿ. ತಿಮ್ಮಾಪೂರ, ನಜೀರ್‌ ಅಹ್ಮದ್‌, ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಹೀಗೆ ಹಲವು ಹೆಸರುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರನ್ನು ಭಾನುವಾರ ಭೇಟಿ ಮಾಡಿದ ಇಬ್ರಾಹಿಂ, ಕೆಲಹೊತ್ತು ಮಾತುಕತೆ ನಡೆಸಿದರು. ತನಗೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡುವಂತೆ ಅವರು ಈ ಹಿಂದೆಯೂ ಬೇಡಿಕೆ ಇಟ್ಟಿದ್ದರು. ಈ ಮಧ್ಯೆ ಅವರು, ಕಾಂಗ್ರೆಸ್ ತ್ಯಜಿಸಿ ಜೆಡಿಎಸ್‌ ಸೇರಲಿದ್ದಾರೆ ಎಂಬ ವದಂತಿಯೂ ಹರಡಿತ್ತು.

ADVERTISEMENT

ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಇಬ್ರಾಹಿಂ, ‘ಯೌವನ ತುಂಬಿದಾಗ ಮದುವೆ ಯಾರು ಯಾಕೆ ಬೇಡ ಅಂತಾರೆ? ವಿಧಾನ ಪರಿಷತ್‌ನಲ್ಲಿ ಈಗ ನನಗೆ ಯೌವನ ತುಂಬಿದೆ. ಹೈಕಮಾಂಡ್ ಏನು ಮಾಡುತ್ತದೊ ನೋಡೋಣ’ ಎಂದರು.

‘ಕುಮಾರಸ್ವಾಮಿ, ದೇವೇಗೌಡ ಅವರ ಮೇಲೆ ನನಗೆ ಈಗಲೂ ವಿಶ್ವಾಸವಿದೆ. ಅಡ್ವಾಣಿ ಅವರ ಮೇಲೆಯೂ ವಿಶ್ವಾಸವಿದೆ. ಈಗಲೂ ಅವರ ಮನೆಗೆ ಹೋಗುತ್ತೇನೆ. ದೇಶ ಉಳಿಸಿ ಎಂದು ಬಿಜೆಪಿಯಲ್ಲಿರುವ ಸಮಾನ ಮನಸ್ಕರಿಗೂ ನಾನು ಮನವಿ ಮಾಡುತ್ತೇನೆ’ ಎಂದರು.

‘ವಿಧಾನಪರಿಷತ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕೆಲವರು ಮನವಿ ಮಾಡಿದ್ದಾರೆ. ಈ ಬಗ್ಗೆ ಹೈಕಮಾಂಡ್ ಜತೆಗೆ ಮಾತುಕತೆ ನಡೆಸಿ ಅಂತಿಮಗೊಳಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

ಸಿದ್ದರಾಮಯ್ಯ ಅವರನ್ನು ಇಬ್ರಾಹಿಂ ಭೇಟಿ ಬೆನ್ನಲ್ಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಅಧ್ಯಕ್ಷ ಸಲೀಂ ಅಹ್ಮದ್ ಮತ್ತು ಅಲ್ಲಂ ವೀರಭದ್ರಪ್ಪ ಕೂಡ ಭೇಟಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.