ADVERTISEMENT

ದೆಹಲಿ ಭೇಟಿ ಬಳಿಕ ನಿರ್ಧಾರ ಪ್ರಕಟ: ಸಿ.ಎಂ.ಇಬ್ರಾಹಿಂ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 0:58 IST
Last Updated 12 ಫೆಬ್ರುವರಿ 2022, 0:58 IST
ಸಿ.ಎಂ.ಇಬ್ರಾಹಿಂ
ಸಿ.ಎಂ.ಇಬ್ರಾಹಿಂ   

ಮಂಡ್ಯ: ‘ಕಾಂಗ್ರೆಸ್‌ನ ದೆಹಲಿ ಮುಖಂಡರು ಮಾತುಕತೆಗೆ ಕರೆದಿದ್ದು, ಅಲ್ಲಿಗೆ ಹೋಗಿ ಬಂದ ಬಳಿಕ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನನ್ನಲ್ಲಿ ನಾಯಕತ್ವವಿಲ್ಲವೆಂದು ಕಡೆಗಣಿಸಿರುವ ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಪಕ್ಷ ಬಿಡಬೇಕಾದ ಸನ್ನಿವೇಶ ನಿರ್ಮಾಣವಾದಾಗಷ್ಟೇ ಮಾತನಾಡಲು ಬರುತ್ತಾರೆ. ಮಾತನಾಡಿ ಏನು ಪ್ರಯೋಜನ, ಏನಾದರೂ ಕಾರ್ಯಗತವಾಗಬೇಕಲ್ಲವೇ?’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಎಚ್.ಡಿ.ದೇವೇಗೌಡ ಅವರನ್ನು ಬಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ. ದೇವೇಗೌಡ, ಕುಮಾರಸ್ವಾಮಿ ಅವರ ಜೊತೆ ನಮ್ಮದು ಹಳೇ ಸಂಬಂಧ. ಹಿಂದೆಯೂ ನನಗೆ ದೇವೇಗೌಡರ ಮಾರ್ಗದರ್ಶನ ಇತ್ತು. ಮುಂದೆಯೂ ಅವರ ಮಾರ್ಗದರ್ಶನದಲ್ಲಿಯೇ ಮುನ್ನಡೆಯುತ್ತೇನೆ’ ಎಂದರು.

ADVERTISEMENT

ಮುಸ್ಕಾನ್ ಖಾನ್ ಮನೆಗೆ ಭೇಟಿ: ಪಿಇಎಸ್ ಕಾಲೇಜಿನ ಬೀಬಿ ಮುಸ್ಕಾನ್ ಖಾನ್ ಮನೆಗೆ ಭೇಟಿ ನೀಡಿದ ಅವರು ವಿದ್ಯಾರ್ಥಿನಿ ಹಾಗೂ ಆಕೆಯ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದರು‌.

‘ಹುಡುಗಿಯ ಧೈರ್ಯ ಮೆಚ್ಚಬೇಕು‌. ಅಷ್ಟೊಂದು ಹುಡುಗರ ಘೋಷಣೆಯನ್ನು ಒಬ್ಬಳೇ ಎದುರಿಸಿದ್ದಾಳೆ. ಆಕೆ ಕರ್ನಾಟಕದ ಮಗಳು’ ಎಂದರು.‘ಅಲ್ಲಾಹು ಅಕ್ಬರ್ ಘೋಷಣೆ ಕೂಗಿದರೆ ಪ್ರಚೋದನೆ ಆಗುವುದಿಲ್ಲ. ಅದು ತಪ್ಪಲ್ಲ’ ಎಂದರು.

‘ಕೇಸರಿ ಶಾಲು, ಹಿಜಾಬ್ ವಿವಾದ ನ್ಯಾಯಾಲಯದಲ್ಲಿ ಇದ್ದು ಅಂತಿಮ ತೀರ್ಪಿಗೆ ತಲೆಬಾಗುತ್ತೇವೆ. ಹಿಜಾಬ್ ಸೀರೆಯ ಸೆರಗು ಇದ್ದಂತೆ. ರಾಷ್ಟ್ರಪತಿಯಾಗಿದ್ದ ಪ್ರತಿಭಾ ಪಾಟೀಲ‌ ಅವರು ಸೆರಗು ಹಾಕಿಕೊಳ್ಳುತ್ತಿದ್ದರು. ಇಳಕಲ್ ಸೀರೆ ಉಟ್ಟವರೂ ಸೆರಗು ಹಾಕಿಕೊಳ್ಳುತ್ತಾರೆ. ಅದು ತಪ್ಪಾ?’ ಎಂದರು.

‘ಸದ್ಯದಲ್ಲೇ ಇಬ್ರಾಹಿಂ ಮನೆಯಲ್ಲಿ ಸಿದ್ದರಾಮಯ್ಯ ಭೋಜನ’

ಮೈಸೂರು: ‘ವಿರೋಧ ಪಕ್ಷದ ನಾಯಕಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನೆಗೆ ಸದ್ಯದಲ್ಲೇ ಊಟಕ್ಕೆ ಹೋಗುತ್ತಾರೆ. ಆಗಲೇ ಅವರ ಅಸಮಾಧಾನವನ್ನೂ ಬಗೆಹರಿಸಲಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

‘ಇಬ್ರಾಹಿಂ ಅವರ ಮನೆಗೆ ನಾನೇ ಹೋಗಿ ಮಾತನಾಡಿದ್ದೇನೆ. ಆಲೋಚಿಸಿ ನಿರ್ಧರಿಸುವುದಾಗಿ ಭರವಸೆ ನೀಡಿದ್ದಾರೆ. ಅವರು ಪಕ್ಷ ತ್ಯಜಿಸುವುದಿಲ್ಲವೆಂಬ ವಿಶ್ವಾಸವಿದೆ’ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.