ADVERTISEMENT

ಕುಮಾರಸ್ವಾಮಿ ಉತ್ಸಾಹ ಕುಗ್ಗಿಸಿದ ಗೌಡರ ಮಧ್ಯಂತರ ಚುನಾವಣೆ ಹೇಳಿಕೆ

ಮಧ್ಯಂತರ ಚುನಾವಣೆ ಹೇಳಿಕೆ ಇಲ್ಲ ಎಂದ ಕುಮಾರಸ್ವಾಮಿ

ಗಣೇಶ ಚಂದನಶಿವ
Published 21 ಜೂನ್ 2019, 8:12 IST
Last Updated 21 ಜೂನ್ 2019, 8:12 IST
   

ಕಲಬುರ್ಗಿ: ‘ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು’ ಎಂಬ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಹೇಳಿಕೆ, ಗ್ರಾಮ ವಾಸ್ತವ್ಯಕ್ಕೆ ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಉತ್ಸಾಹ ಕುಗ್ಗುವಂತೆ ಮಾಡಿತು.

ರೈಲಿನ ಮೂಲಕ ಬೆಂಗಳೂರಿನಿಂದ ಯಾದಗಿರಿಗೆ ಲವಲವಿಕೆಯಿಂದಲೇ ಬಂದ ಮುಖ್ಯಮಂತ್ರಿ, ಗ್ರಾಮ ವಾಸ್ತವ್ಯದ ಪರಿಕಲ್ಪನೆ ಬಗ್ಗೆ ಹೇಳಿ ಹೆಮ್ಮೆಪಟ್ಟುಕೊಂಡು ಸರ್ಕಾರಿ ಪ್ರವಾಸಿ ಮಂದಿರಕ್ಕೆ ವಿಶ್ರಾಂತಿಗೆ ತೆರಳಿದ್ದರು.

ಬೆಂಗಳೂರಿನಲ್ಲಿ ದೇವೇಗೌಡರು ಮಧ್ಯಂತರ ಚುನಾವಣೆಯ ಸಾಧ್ಯತೆ ಬಗ್ಗೆ ಮಾತನಾಡುತ್ತಿದ್ದಂತೆವಿದ್ಯುನ್ಮಾನ ಮಾಧ್ಯಮಗಳ ಚಿತ್ತ ಅತ್ತ ಹೊರಳಿತು.

ADVERTISEMENT

ಸ್ನಾನಮುಗಿಸಿ ಯಾದಗಿರಿ ಪ್ರವಾಸಿ ಮಂದಿರದಿಂದ ಹೊರಬಂದ ಕುಮಾರಸ್ವಾಮಿ ಬೇಸರದಲ್ಲಿರುವಂತೆ ಕಂಡುಬಂದರು.ಗ್ರಾಮ ವಾಸ್ತವ್ಯದ ಬದಲು ಮಧ್ಯಂತರ ಚುನಾವಣೆಯ ವಿಷಯವೇ ಮುನ್ನಲೆಗೆ ಬಂದಿದ್ದರಿಂದಮಾಧ್ಯಮದವರಿಂದ ಆ ಕುರಿತಾದ ಪ್ರಶ್ನೆ ಎದುರಾದವು.

‘ಮಧ್ಯಂತರ ಚುನಾವಣೆ ಆಗುವ ಸಂಭವ ಇಲ್ಲ. ಐದು ವರ್ಷಗಳ ಅವಧಿಗೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ’ ಎಂದಷ್ಟೇ ಚುಟುಕಾಗಿ ಉತ್ತರಿಸಿದರು. ಮತ್ತೆ ಎದುರಾದ ಪ್ರಶ್ನೆಗಳಿಗೆ ಉತ್ತರಿಸದೆ ಹೊರಟುಬಿಟ್ಟರು.

ಗುರುಮಠಕಲ್‌ ಶಾಸಕ ನಾಗನಗೌಡ ಕಂದಕೂರ ಅವರ ಯಾದಗಿರಿ ನಿವಾಸದಲ್ಲಿ ಉಪಾಹಾರ ಮಾಡಿದ ಮುಖ್ಯಮಂತ್ರಿ, ಚಂಡರಕಿ ಗ್ರಾಮಕ್ಕೆ ನಿಗದಿಗಿಂತ ಸ್ವಲ್ಪ ವಿಳಂಬವಾಗಿಯೇ ಹೋದರು.

ಚಂಡರಕಿ ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿಯೂ ಮುಖ್ಯಮಂತ್ರಿ ಲವಲವಿಕೆಯಿಂದ ಇರಲಿಲ್ಲ. ಮುಖ ಕಳೆಗುಂದಿತ್ತು. ವೇದಿಕೆಯಲ್ಲಿ ತಮ್ಮ ಅಕ್ಕಪಕ್ಕ ಸಚಿವರಾದ ಪ್ರಿಯಾಂಕ್‌ ಖರ್ಗೆ, ರಾಜಶೇಖರ ಪಾಟೀಲ ಹುಮನಾಬಾದ್‌ (ಇವರಿಬ್ಬರೂ ಕಾಂಗ್ರೆಸ್‌ನವರು) ಅವರನ್ನು ಕೂರಿಸಿಕೊಂಡು ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತ ‘ಎಲ್ಲವೂ ಸರಿ ಇದೆ’ ಎಂಬಂತೆ ಬಿಂಬಿಸಲು ಯತ್ನಿಸಿದರು.

ಮೈತ್ರಿ ಧರ್ಮ ಪಾಲನೆ: ಏತನ್ಮಧ್ಯೆ ಚಂಡರಕಿಯಲ್ಲಿ ಸ್ಥಳೀಯ ಜೆಡಿಎಸ್‌ ಶಾಸಕರ ಬೆಂಬಲಿಗರು ಕೇವಲ ಜೆಡಿಎಸ್‌ನವರ ಬ್ಯಾನರ್‌, ಕಟೌಟ್‌ಗಳನ್ನು ಅಳವಡಿಸಿದ್ದರು. ರಾತ್ರಿ ಕಳೆಯುವುದರೊಳಗಾಗಿ ಕಾಂಗ್ರೆಸ್ ಮುಖಂಡರ ಕಟೌಟ್‌ಗಳೂ ಪ್ರತ್ಯಕ್ಷವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.