ಬೆಂಗಳೂರು: ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಸಿ.ಎಂ. ಲಿಂಗಪ್ಪ ಅವರ ಪುತ್ರ ಎಲ್. ಚಂದ್ರಶೇಖರ್ ಬಿಜೆಪಿಗೆ ಸೇರಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿಯುವುದು ಬಹುತೇಕ ಖಚಿತ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಅವರು ಪಕ್ಷಕ್ಕೆ ಬುಧವಾರ ಸೇರ್ಪಡೆಯಾದರು. ಮಾಜಿ ಸಚಿವ ಸಿ.ಪಿ.ಯೋಗೀಶ್ವರ, ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ಈಚೆಗೆ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಚಂದ್ರಶೇಖರ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಟಿಕೆಟ್‌ಗಾಗಿ ಅವರು ಹಾಗೂ ಇಕ್ಬಾಲ್ ಹುಸೇನ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ಪಕ್ಷವು ಇಕ್ಬಾಲ್ ಅವರಿಗೆ ಅವಕಾಶ ನೀಡಿತ್ತು.
ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವಂತೆ ಲಿಂಗಪ್ಪ ಪಕ್ಷದ ನಾಯಕರಿಗೆ ಒತ್ತಡ ಹೇರಿದ್ದರು. ಇದಕ್ಕೆ ವರಿಷ್ಠರು ಮಣಿದಿರಲಿಲ್ಲ.
ಶಿವಮೊಗ್ಗ, ಬಳ್ಳಾರಿ ಲೋಕಸಭಾ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ರಾಜ್ಯ ಸಮಿತಿ ಮಂಗಳ
ವಾರ ಅಂತಿಮಗೊಳಿಸಿತ್ತು. ಸ್ಥಳೀಯ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿ ಈ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅಧಿಕಾರವನ್ನು ಯಡಿಯೂರಪ್ಪ ಅವರಿಗೆ ನೀಡಿತ್ತು. ಅದರ ಬೆನ್ನಲ್ಲೇ, ‘ಆಪರೇಷನ್’ ನಡೆದಿದೆ. ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವ ಸಂಬಂಧ ಶಾಸಕ ಆರ್.ಅಶೋಕ ನೇತೃತ್ವದಲ್ಲಿ ಪಕ್ಷದ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಿತು. ವಿಧಾನಪರಿಷತ್ ಮಾಜಿ ಸದಸ್ಯ ಅಶ್ವತ್ಥನಾರಾಯಣ ಅವರನ್ನು ಕಣಕ್ಕೆ ಇಳಿಸಲು ಪಕ್ಷ ಯೋಜಿಸಿದೆ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಬಗ್ಗೆ ಮಾಜಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ‘ಕೈ’ ಪಾಳಯದ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಚಲುವರಾಯಸ್ವಾಮಿ ಅವರನ್ನು ಸೆಳೆದು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿತ್ತು. ಆದರೆ, ಚಲುವರಾಯಸ್ವಾಮಿ ಉತ್ಸುಕರಾಗಿಲ್ಲ ಎಂದು ಗೊತ್ತಾಗಿದೆ.
ಆಗ ಅಪ್ಪ–ಈಗ ಮಗ: 1994ರ ಚುನಾವಣೆಯಲ್ಲಿ ಎಚ್.ಡಿ.ದೇವೇಗೌಡ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಪ್ರಧಾನಿಯಾಗಿ ಆಯ್ಕೆಯಾದ ಕಾರಣಕ್ಕೆ ಶಾಸಕ ಸ್ಥಾನಕ್ಕೆ ಅವರು 1996ರಲ್ಲಿ ರಾಜೀನಾಮೆ ನೀಡಿದ್ದರು. ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ.ಎಂ. ಲಿಂಗಪ್ಪ ಜಯಭೇರಿ ಬಾರಿಸಿದ್ದರು. ಈಗ ದೇವೇಗೌಡರ ಕುಟುಂಬದ ವಿರುದ್ಧ ಅವರ ಪುತ್ರ ತೊಡೆ ತಟ್ಟಿದ್ದಾರೆ.
*ಪೂರ್ಣ ಮನಸ್ಸಿನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ರಾಮನಗರದಲ್ಲಿ ಕಮಲ ಅರಳಿಸುವುದು ನನ್ನ ಗುರಿ
-ಎಲ್.ಚಂದ್ರಶೇಖರ್
*ರಾಮನಗರಕ್ಕೆ ಸಿ.ಪಿ.ಯೋಗೀಶ್ವರ್, ಎಂ.ರುದ್ರೇಶ್, ಎಲ್.ಚಂದ್ರಶೇಖರ್ ಅವರಂಥ ಸಮರ್ಥ ಅಭ್ಯರ್ಥಿಗಳಿದ್ದಾರೆ. ಹೆಸರನ್ನು ಸದ್ಯವೇ ಕೇಂದ್ರ ಸಮಿತಿಗೆ ಶಿಫಾರಸು ಮಾಡುತ್ತೇವೆ
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.