ADVERTISEMENT

ಗದಗ: ಮೆಟ್ಟಿಲು ಹತ್ತಲಾಗದೇ ಕಾರ್ಯಕ್ರಮ ಮೊಟಕುಗೊಳಿಸಿ ಹಿಂದಿರುಗಿದ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 15:02 IST
Last Updated 3 ಜೂನ್ 2025, 15:02 IST
   

ಗದಗ: ಮೆಟ್ಟಿಲು ಹತ್ತಲಾಗದ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಮೊಟಕುಗೊಳಿಸಿ ಹಿಂದಿರುಗಿದ ಪ್ರಸಂಗ ಮಂಗಳವಾರ ನಡೆಯಿತು.

ಪೂರ್ವನಿಗದಿಯಂತೆ ಇಲ್ಲಿನ ಪಂಡಿತ್‌ ಭೀಮಸೇನ ಜೋಶಿ ರಂಗ ಮಂದಿರದಲ್ಲಿ ಗದಗ ಬೆಟಗೇರಿ ವ್ಯಾಪಾರ, ಸಂಸ್ಖೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ ಉದ್ಘಾಟನೆ ಹಾಗೂ ಪ್ರಾಧಿಕಾರದ ಅಭಿವೃದ್ಧಿ ಪರಿಕಲ್ಪನೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಬೇಕಿತ್ತು.

ಮಧ್ಯಾಹ್ನದ ಊಟ ಮುಗಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಂಗಮಂದಿರಕ್ಕೆ ಬಂದ ಮುಖ್ಯಮಂತ್ರಿ ಅವರಿಗೆ ಕಾಲು ನೋವು ಇದ್ದ ಕಾರಣ ಮೆಟ್ಟಿಲು ಹತ್ತಿ ವೇದಿಕೆಗೆ ಬರಲು ಸಾಧ್ಯವಾಗಲಿಲ್ಲ.

ADVERTISEMENT

ಹೀಗಾಗಿ, ವೇದಿಕೆಗೆ ನೇರ ಸಂಪರ್ಕ ಕಲ್ಪಿಸುವ ಕೆಳಬದಿಯಲ್ಲಿದ್ದ ಎರಡು ಬಾಗಿಲುಗಳ ಮೂಲಕ ಅವರನ್ನು ಕರೆತರಲು ಸಚಿವ ಎಚ್‌.ಕೆ.ಪಾಟೀಲ ಮುಂದಾದರು. ಆದರೆ, ಎಡ ಭಾಗದ ಬಾಗಿಲನ್ನು ವೆಲ್ಡಿಂಗ್‌ ಮಾಡಿ ಶಾಶ್ವತವಾಗಿ ಮುಚ್ಚಿದ್ದರಿಂದ ಇಲ್ಲಿಂದಲೂ ಒಳಕ್ಕೆ ಪ್ರವೇಶ ಸಾಧ್ಯವಾಗಲಿಲ್ಲ. ಬಲಭಾಗದಲ್ಲಿಯೂ ಬೀಗ ಹಾಕಿದ್ದರಿಂದ ಸಕಾಲದಲ್ಲಿ ತೆಗೆಯಲು ಸಾಧ್ಯವಾಗಲಿಲ್ಲ. ಬೀಗ ಒಡೆಯುವ ಪ್ರಯತ್ನವೂ ಸಫಲವಾಗಲಿಲ್ಲ.

ಇನ್ನೊಂದೆಡೆ, ರಂಗಮಂದಿರದ ಒಳಗೆ ಜಿಲ್ಲಾಧಿಕಾರಿ ಸಿ.ಎನ್‌.ಶ್ರೀಧರ್ ಅವರು ಬಾಗಿಲಿಗೆ ಅಡ್ಡಲಾಗಿದ್ದ ದೊಡ್ಡ ಎಲ್‌ಇಡಿ ಪರದೆ ಸರಿಸಿ, ಬಾಗಿಲು ತೆಗೆಯಲು ಮಾಡಿದ ಪ್ರಯತ್ನವೂ ಕೈಗೂಡಲಿಲ್ಲ.

ಇಷ್ಟೆಲ್ಲಾ ನಡೆಯುವವರೆಗೆ ಸುಮಾರು 15 ನಿಮಿಷ ಸಿಎಂ ಕಾರಿನಲ್ಲಿಯೇ ಕುಳಿತಿದ್ದರು. ಕೊನೆಗೆ ಸಹನೆ ಕಳೆದುಕೊಂಡ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಕಾರ್ಯಕ್ರಮ ಮೊಟಕುಗೊಳಿಸಿ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಪೌರಾಡಳಿತ ಸಚಿವ ರಹೀಂ ಖಾನ್‌ ಕಾರ್ಯಕ್ರಮ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.