
ಸಿದ್ದರಾಮಯ್ಯ
ಬೆಂಗಳೂರು: ‘ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಮನುವಾದಿಯಾಗಿದ್ದಾರೆ. ಹಾಗಾಗಿ ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಬಿ.ಆರ್.ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ವಿಧಾನಸೌಧಧ ಮುಂಭಾಗ ಇರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಅವರು ಮಾತನಾಡಿದರು. ‘ಭಗವದ್ಗೀತೆಯನ್ನು ಪಠ್ಯಕ್ಕೆ ಸೇರಿಸಬೇಕೆಂದು ಕುಮಾರಸ್ವಾಮಿ ಕೇಂದ್ರ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಇದು ಬಿಜೆಪಿ–ಜೆಡಿಎಸ್ ಮೈತ್ರಿಯ ಫಲ’ ಎಂದರು.
‘ಹಿಂದೂ ಧರ್ಮದ ಸಾಮಾಜಿಕ ವ್ಯವಸ್ಥೆಗೆ ಅಂಬೇಡ್ಕರ್ ಅವರು ರೋಸಿ ಹೋಗಿದ್ದರು. ಅವರ ಕೊನೆಯ ದಿನಗಳಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದರು. ಹುಟ್ಟುವಾಗ ಹಿಂದೂವಾಗಿದ್ದೆ, ಸಾಯುವಾಗ ಹಿಂದೂವಾಗಿ ಸಾಯಲಾರೆ. ಹಿಂದೂ ಧರ್ಮದ ಸುಧಾರಣೆಗೆ ಪ್ರಯತ್ನಪಟ್ಟು, ಅದು ಸಾಧ್ಯವಾಗದೆ ಬೌದ್ಧ ಧರ್ಮ ಸ್ವೀಕರಿಸಿದ್ದಾಗಿ ಹೇಳಿದ್ದರು’ ಎಂದು ಸಿದ್ದರಾಮಯ್ಯ ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.