ADVERTISEMENT

ಮೀಸಲಾತಿ ವಿರೋಧ ಬಿಜೆಪಿಗೆ ರಕ್ತಗತ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 15:48 IST
Last Updated 12 ಸೆಪ್ಟೆಂಬರ್ 2024, 15:48 IST
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ   

ಬೆಂಗಳೂರು: ‘ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್‌ಗಾಂಧಿಯವರ ಹೇಳಿಕೆ ಅರ್ಥ ಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಆವರು, ‘ರಾಹುಲ್‌ಗಾಂಧಿ ಹೇಳಿಕೆ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ಪ್ರತಿಭಟನೆ, ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ ಮಾಡಿದಂತೆ’ ಎಂದು ಅವರು ಹೇಳಿದ್ದಾರೆ.

‘ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾದ ನಂತರ ಮೀಸಲಾತಿ ಏಕೆ ಬೇಕು? ಇದನ್ನು ರಾಹುಲ್ ಗಾಂಧಿ ಮಾತ್ರವಲ್ಲ, ನಾನೂ ಹೇಳುತ್ತೇನೆ. ಇದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ADVERTISEMENT

‘ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ. ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ’ ಎಂದು ಹೇಳಿದ್ದಾರೆ.

‘ಆರ್‌ಎಸ್‌ಎಸ್‌ ಹುಟ್ಟಿನಿಂದಲೇ ವರ್ಣ ವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದಿದೆ. ಸಾಮಾಜಿಕ ನ್ಯಾಯದಾನದ ಅವಕಾಶಗಳು ತೆರೆದುಕೊಂಡಾಗೆಲ್ಲ ಬಿಜೆಪಿ ಅದರ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿದೆ’ ಎಂದು ಅವರು ಹೇಳಿದ್ದಾರೆ.

‘ಮೀಸಲಾತಿಯ ಫಲಾನುಭವಿಗಳಾದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ಸಮುದಾಯ ಇಂದು ಜಾಗೃತವಾಗಿದೆ. ಯಾರು ತಮ್ಮ ಶತ್ರುಗಳು ಮತ್ತು ಮಿತ್ರರು ಎನ್ನುವುದನ್ನು ಅವರು ಅರಿತುಕೊಂಡಿದ್ದಾರೆ. ಮೀಸಲಾತಿ ವಿರೋಧವನ್ನು ಆಂತರ್ಯದಲ್ಲಿ ಅಡಗಿಸಿಕೊಂಡು ಬಹಿರಂಗವಾಗಿ ಮೀಸಲಾತಿ ಪರ ಘೋಷಣೆ ಕೂಗಿದರೆ ನಂಬುವಷ್ಟು ನಮ್ಮ ಜನ ದಡ್ಡರಲ್ಲ’ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.