
ಸಿದ್ದರಾಮಯ್ಯ
ಸುವರ್ಣ ವಿಧಾನಸೌಧ (ಬೆಳಗಾವಿ): ‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಆರ್ಥಿಕ ತಜ್ಞ ಪ್ರೊ.ಎಂ. ಗೋವಿಂದ ರಾವ್ ಸಮಿತಿ ನೀಡಲಿರುವ ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೆ ತರುವ ಮೂಲಕ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಶ್ರಮಿಸಲು ಬದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಸುಮಾರು ಮೂರು ಗಂಟೆಗೂ ಹೆಚ್ಚು ತಾಸು ಉತ್ತರ ನೀಡಿದ ಅವರು, ‘ಸಮಿತಿಯು ಜನವರಿಯಲ್ಲಿ ವರದಿ ಸಲ್ಲಿಸಲಿದೆ’ ಎಂದರು.
ಕಾಂಗ್ರೆಸ್ ಸರ್ಕಾರ ಕೈಗೊಂಡಿರುವ ಯೋಜನೆಗಳು, ಬಿಜೆಪಿ ಸರ್ಕಾರದ ಅವಧಿಯ ವೈಫಲ್ಯ, ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಮುಖ್ಯಮಂತ್ರಿ ವಿವರಿಸಿದರು.
‘ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳು, ಅನುದಾನ ವೆಚ್ಚದ ಕುರಿತಂತೆ ಶ್ವೇತಪತ್ರ ಹೊರಡಿಸಲೂ ಸಿದ್ಧ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಲು ದೆಹಲಿಗೆ ಸರ್ವಪಕ್ಷ ನಿಯೋಗ ಕೊಂಡೊಯ್ಯುತ್ತೇವೆ. ಆಗ ವಿರೋಧ ಪಕ್ಷಗಳ ಸದಸ್ಯರೂ ಬನ್ನಿ’ ಎಂದು ಆಹ್ವಾನಿಸಿದರು.
ಆದರೆ, ಮುಖ್ಯಮಂತ್ರಿಯ ಉತ್ತರದಿಂದ ತೃಪ್ತರಾಗದ ಬಿಜೆಪಿ, ಜೆಡಿಎಸ್ ಸದಸ್ಯರು, ‘ಉತ್ತರ ಕರ್ನಾಟಕ ದ್ರೋಹಿ ಸರ್ಕಾರವಿದು’ ಎಂದು ಕೂಗುತ್ತಾ ಸಭಾತ್ಯಾಗ ಮಾಡಿದರು. ತಿರುಗೇಟು ನೀಡಿದ ಮುಖ್ಯಮಂತ್ರಿ, ‘371ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ. ಅದನ್ನು ತಿರಸ್ಕರಿಸಿದ್ದು ಬಿಜೆಪಿಯ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ. ಹೀಗಾಗಿ, ಉತ್ತರ ಕರ್ನಾಟಕದ ಬಗ್ಗೆ ವಿರೋಧ ಪಕ್ಷದವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ’ ಎಂದು ಸಿಡಿಮಿಡಿಗೊಂಡರು.
ಮುಖ್ಯಮಂತ್ರಿ ಹೇಳಿದ್ದೇನು? ‘ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಂಜುಂಡಪ್ಪ ಸಮಿತಿ ರಚನೆಯಾಗಿತ್ತು. ನಂಜುಂಡಪ್ಪ ವರದಿಯ ಬಳಿಕ ನೀಡಿದ ಅನುದಾನಗಳ ಬಳಕೆ, ಅನುಷ್ಠಾನ ಮತ್ತು ಫಲಿತಾಂಶದ ಬಗ್ಗೆ ಅಧ್ಯಯನ ಮಾಡಲು ಗೋವಿಂದ್ ರಾವ್ ಸಮಿತಿ ರಚನೆ ಮಾಡಿದ್ದೇವೆ. ಸಮಿತಿಯ ವರದಿಯ ಪ್ರಕಾರ, ಯಾವ ಜಿಲ್ಲೆ ಹಿಂದುಳಿದಿದೆಯೊ ಆ ಜಿಲ್ಲೆಗಳಿಗೆ ಹೆಚ್ಚು ಒತ್ತು ಕೊಟ್ಟು ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
‘ಉತ್ತರ ಕರ್ನಾಟಕದ ಭಾಗವನ್ನು ನಮ್ಮ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಕರ್ನಾಟಕದ ಎಲ್ಲ ಜನರ ತಲಾ ಆದಾಯ ಹೆಚ್ಚಬೇಕೆನ್ನುವುದು ನಮ್ಮ ಉದ್ದೇಶ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಇಲ್ಲಿಯವರೆಗೆ ಸರ್ಕಾರ ಕೆಲಸ ಮಾಡಿದೆ. ಮುಂದೆಯೂ ಹೆಚ್ಚು ಒತ್ತು ನೀಡಿ, ಸಾಧ್ಯವಾದ ಮಟ್ಟಿಗೆ ತಲಾದಾಯದ ಅಂತರ ಕಡಿಮೆ ಮಾಡಲಾಗುವುದು’ ಎಂದರು.
‘ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ₹ 500 ಕೋಟಿ ಒದಗಿಸಬೇಕೆಂದು ಎಲ್ಲ ಪಕ್ಷದವರು ಮನವಿ ಮಾಡಿದ್ದಾರೆ. ಗೋವಿಂದರಾವ್ ವರದಿ ಬಂದ ನಂತರ ಈ ಬಗ್ಗೆಯೂ ಪರಿಶೀಲಿಸಲಾಗುವುದು’ ಎಂದರು.
ಮುಂದಿನ ಬಜೆಟ್‌ನಲ್ಲಿ ಹಣ: ‘ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಅನುಷ್ಠಾನಕ್ಕೆ ಅಗತ್ಯವಾದ 75 ಸಾವಿರ ಎಕರೆ ಭೂಸ್ವಾಧೀನವನ್ನು ಒಂದೇ ಬಾರಿಗೆ ಮಾಡಲು ಮುಂದಿನ ಬಜೆಟ್‌ನಲ್ಲಿ ಹಣ ಒದಗಿಸುತ್ತೇವೆ’ ಎಂದು ಮುಖ್ಯಮಂತ್ರಿ ಹೇಳಿದರು.
ಮುಖ್ಯಮಂತ್ರಿ ತಮ್ಮ ಉತ್ತರದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಹೊಸ ಯೋಜನೆಗಳು ಅಥವಾ ಅನುದಾನ ಘೋಷಣೆ ಮಾಡಿಲ್ಲವೆಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯಕ್ಕೆ ನೀಡಿರುವ ಕೊಡುಗೆಗಳ ಕುರಿತು ಶ್ವೇತಪತ್ರ ಪ್ರಕಟಿಸಿ’ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.