ಸಿ.ಎಂ. ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿ ಪ್ರತಿ ತಿಂಗಳು ಸರಾಸರಿ ₹54 ಲಕ್ಷ ವೆಚ್ಚ ಮಾಡಲಾಗುತ್ತಿದೆ.
‘ಪಾಲಿಸಿ ಫ್ರಂಟ್’ ಎಂಬ ಸಂಸ್ಥೆ ಮುಖ್ಯಮಂತ್ರಿಯವರ ಅಧಿಕೃತ ಮತ್ತು ಖಾಸಗಿ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿದೆ.
‘ರಾಜ್ಯವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಣವಿಲ್ಲದ ಕಾರಣ ಕಾಮಗಾರಿಗಳೂ ನಿಂತು ಹೋಗಿವೆ. ಕೆಲಸ ಮಾಡಿದ ಗುತ್ತಿಗೆದಾರರಿಗೆ ನೀಡಲು ಹಣವಿಲ್ಲ. ಆದರೆ, ಮುಖ್ಯಮಂತ್ರಿ ಕಚೇರಿ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರಕ್ಕೆ ಭಾರಿ ಮೊತ್ತ ಖರ್ಚು ಮಾಡುತ್ತಿದೆ ಎಂಬ ವಿಷಯ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮಾಹಿತಿ ನೀಡಬೇಕು’ ಎಂದು ಮರಿಲಿಂಗಗೌಡ ಮಾಲಿ ಪಾಟೀಲ ಎಂಬುವರು ಮಾಹಿತಿ ಹಕ್ಕು ಅಡಿ ಮಾಹಿತಿ ಕೋರಿದ್ದರು.
ಈ ಅರ್ಜಿಗೆ, ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಮತ್ತು ಅಡ್ವರ್ಟೈಸಿಂಗ್ ಲಿಮಿಟೆಡ್ ಇದಕ್ಕೆ ಉತ್ತರ ನೀಡಿದ್ದು, ಸಂಸ್ಥೆಗೆ ಬಿಡುಗಡೆ ಮಾಡಿರುವ ಮೊತ್ತದ ವಿವರವನ್ನೂ ನೀಡಿದೆ. ‘ಪ್ರತಿ ತಿಂಗಳು ಸರಾಸರಿ ₹54 ಲಕ್ಷ ಪಾವತಿ ಮಾಡಲಾಗುತ್ತಿದೆ. 2023ರ ಅಕ್ಟೋಬರ್‌ನಿಂದ 2024ರ ಮಾರ್ಚ್ ಅವಧಿಯಲ್ಲಿ ₹3 ಕೋಟಿ ಪಾವತಿಸಲಾಗಿದೆ. 2024ರ ಮಾರ್ಚ್ ಒಂದೇ ತಿಂಗಳಲ್ಲಿ ಎರಡು ಬಿಲ್‌ಗಳ ಮೂಲಕ ₹1.06 ಕೋಟಿ ಪಾವತಿಸಲಾಗಿದೆ’ ಎಂದು ಹೇಳಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ‘ಪಾಲಿಸಿ ಫ್ರಂಟ್’, ‘ನಾವು ಮುಖ್ಯಮಂತ್ರಿ ಮತ್ತು ವಾರ್ತಾ ಇಲಾಖೆಯ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿದ್ದೇವೆ. ಸರ್ಕಾರದ ನೀತಿಗಳು, ಯೋಜನೆಗಳು, ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುತ್ತಿದ್ದೇವೆ. ವಿವಿಧ ಕಾರ್ಯಕ್ರಮಗಳ ಪ್ರಚಾರಾಂದೋಲನಗಳಲ್ಲೂ ನಿರತರಾಗಿದ್ದೇವೆ’ ಎಂದು ಹೇಳಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.