ಬೆಂಗಳೂರು: ‘ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಸಂಸತ್‌ನಲ್ಲಿ ನಿಂತು ಅವರ ಸ್ಮರಣೆಯನ್ನು ವ್ಯಸನ ಎಂದು ತುಚ್ಛೀಕರಿಸುವ ನಿಮ್ಮ ಧಾರ್ಷ್ಟ್ಯಕ್ಕೆ ಶಹಬಾಷ್ ಅನ್ನಲೇಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.
ಅಮಿತ್ ಶಾ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ‘ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಯ ಅಂತರಂಗದ ಅಭಿಪ್ರಾಯವನ್ನು ಬಹಿರಂಗವಾಗಿ, ಧೈರ್ಯದಿಂದ ದೇಶದ ಮುಂದೆ ತೆರೆದಿಟ್ಟಿದ್ದಕ್ಕಾಗಿ ಮತ್ತು ನಿಮ್ಮ ಜೀವಮಾನದಲ್ಲಿ ಒಂದು ಸತ್ಯವನ್ನಾದರೂ ಹೇಳಿದ್ದಕ್ಕೆ ನಿಮ್ಮನ್ನು ಅಭಿನಂದಿಸುತ್ತೇನೆ. ನಿಮ್ಮ ಮಾತಿನಿಂದ ಇಡೀ ದೇಶಕ್ಕೆ ನಿಮ್ಮ ಅಂತರಂಗದ ಅರಿವಾಗಿದೆ’ ಎಂದಿದ್ದಾರೆ.
‘ನಿಮ್ಮ ಪಕ್ಷ ಮತ್ತು ಪರಿವಾರಕ್ಕೆ ಮೋದಿ... ಮೋದಿ... ಎಂದು ಹೇಳುವುದು ಒಂದು ವ್ಯಸನ ಆಗಿದೆ. ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮ ಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರ ಅಲ್ಲ, ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು’ ಎಂದು ಹೇಳಿದ್ದಾರೆ.
‘ಅಂಬೇಡ್ಕರ್ ಹುಟ್ಟದೆ ಇರುತ್ತಿದ್ದರೆ ನಾನು ಊರಲ್ಲಿ ದನ-ಕುರಿ ಮೇಯಿಸಿಕೊಂಡು ಇರಬೇಕಾಗುತ್ತಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬರುತ್ತಿರಲಿಲ್ಲ; ಕಲಬುರಗಿಯ ಯಾವುದಾದರೂ ಕಾರ್ಖಾನೆಯಲ್ಲಿ ಕಾರ್ಮಿಕರಾಗಿರುತ್ತಿದ್ದರು. ನೀವು ಹೇಳುವ ವ್ಯಸನ, ನಮ್ಮ ಪಾಲಿನ ಅಂಬೇಡ್ಕರ್ ಸ್ಮರಣೆಯೇ ನಮ್ಮನ್ನೆಲ್ಲ ಇಲ್ಲಿಗೆ ತಂದು ನಿಲ್ಲಿಸಿ, ನಮಗೆ ಸ್ಥಾನಮಾನ ಮತ್ತು ಜನರ ಸೇವೆ ಮಾಡುವ ಅವಕಾಶ ಕೊಟ್ಟಿದೆ’ ಎಂದಿದ್ದಾರೆ.
‘ಶಾ ಅವರೇ, ‘ಬಾಬಾಸಾಹೇಬರ ಬಗ್ಗೆ ನನಗೆ ಅಪಾರ ಅಭಿಮಾನ ಇದೆ, ಗೌರವ ಇದೆ. ನನ್ನ ಮಾತುಗಳನ್ನು ತಿರುಚಲಾಗಿದೆ’ ಎಂದೆಲ್ಲ ಸ್ಪಷ್ಟೀಕರಣ ಕೊಟ್ಟು ಆತ್ಮವಂಚನೆ ಮಾಡಿಕೊಳ್ಳಬೇಡಿ. ಅದನ್ನು ಸಮರ್ಥಿಸಿಕೊಂಡು ದೇಶವನ್ನು ಎದುರಿಸಿ’ ಎಂದು ಸವಾಲು ಹಾಕಿದ್ದಾರೆ.
‘ನಿಮಗೆ ಛೀಮಾರಿ ಹಾಕುತ್ತಿದ್ದಾರೆ’
‘ಈ ಭೂಮಿಯಲ್ಲಿ ಸೂರ್ಯ-ಚಂದ್ರ ಇರುವವರೆಗೆ ಅಂಬೇಡ್ಕರ್ ಸ್ಮರಣೆ ಇರಲಿದೆ. ನೀವು ತುಚ್ಛೀಕರಿಸಿದಷ್ಟೂ ಪುಟಿದು ಪುಟಿದು ಮೇಲೆದ್ದು ಬಂದು ಅವರು ನಮ್ಮ ಮುನ್ನಡೆಯ ಹಾದಿಗೆ ಬೆಳಕಾಗುತ್ತಾರೆ. ನಿಮ್ಮ ದುರಹಂಕಾರದ ಮಾತಿಗೆ ನಿಮ್ಮ ಚೇಲಾಗಳು ಮೇಜುಕುಟ್ಟಿ ಸಂಭ್ರಮಿಸಿರಬಹುದು. ಆದರೆ, ಅಂಬೇಡ್ಕರ್ ಅವರಿಂದಾಗಿ ಸಮಾನತೆ ಮತ್ತು ಘನತೆಯ ಬದುಕು ಪಡೆದಿರುವ ದೇಶದ ಕೋಟ್ಯಂತರ ಜನ ನಿಮಗೆ ಛೀಮಾರಿ ಹಾಕುತ್ತಿದ್ದಾರೆ ಎನ್ನುವುದು ತಿಳಿದಿರಲಿ’ ಎಂದೂ ಹೇಳಿದ್ದಾರೆ.
‘ಅಂಬೇಡ್ಕರ್ ಮತ್ತು ಅವರು ಬರೆದಿರುವ ದೇಶದ ಸಂವಿಧಾನವನ್ನು ಅವರು ಬದುಕಿರುವಾಗಲೇ ನಿಮ್ಮ ಮಾತೃಸಂಸ್ಥೆ ಆರ್‌ಎಸ್‌ಎಸ್ ಯಾಕೆ ತಿರಸ್ಕರಿಸಿತ್ತು? ಆರ್‌ಎಸ್‌ಎಸ್ ನಾಯಕರಾಗಿದ್ದ ಹೆಡಗೆವಾರ್, ಗೋಲ್ವಾಲ್ಕರ್ ಮತ್ತು ಸಾವರ್ಕರ್ ಸಂವಿಧಾನವನ್ನು ವಿರೋಧಿಸಿ ನೀಡಿರುವ ಹೇಳಿಕೆಗಳೇನು ಎನ್ನುವ ವಿವರ ಇತಿಹಾಸದ ಪುಟಗಳಲ್ಲಿವೆ. ನಿಮ್ಮ ಸುಳ್ಳುಗಳು ಮತ್ತು ಆತ್ಮವಂಚನೆಯ ನಡವಳಿಕೆಗಳಿಂದ ಅದನ್ನು ಮರೆಮಾಚಬಹುದು. ಆದರೆ ಅಳಿಸಿಹಾಕಲಾಗುವುದಿಲ್ಲ ಎನ್ನುವುದು ನೆನಪಿರಲಿ. ಆ ಅಭಿಪ್ರಾಯವನ್ನೇ ನೀವು ಸಂಸತ್‌ನಲ್ಲಿ ಆಡಿದ್ದೀರಿ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.