ADVERTISEMENT

'ಆಡಳಿತ ಕಷ್ಟವಾದರೆ ರಾಜೀನಾಮೆ ಕೊಡಿ'- ಸಿದ್ದರಾಮಯ್ಯ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:15 IST
Last Updated 30 ಸೆಪ್ಟೆಂಬರ್ 2019, 20:15 IST
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ
ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ‘ತಂತಿ ಮೇಲೆ ನಡೆಯುತ್ತಿದ್ದೇನೆ. ಯಾವುದೇ ನಿರ್ಧಾರ ಕೈಗೊಳ್ಳಲು ಯೋಚಿಸುವಂತಾಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್, ಜೆಡಿಎಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರೆ,ಸಾಮಾಜಿಕ ಜಾಲತಾಣಗಳಲ್ಲಿ ಪರ– ವಿರೋಧ ಚರ್ಚೆಗಳು ಮುಂದುವರಿದಿವೆ.

ರಾಜೀನಾಮೆ ಕೊಡಿ:

‘ಯಡಿಯೂರಪ್ಪನವರೇ ತಂತಿ ಮೇಲೆ ಏಕೆ ನಡೆಯುತ್ತೀರಿ? ಮೇಲಿನಿಂದ ಬೀಳಬಹುದು. ತಂತಿ ಮೇಲೆ ನಡೆಯುವುದು ಅನಿವಾರ್ಯವಾದರೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿ’ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕಸಿದ್ದರಾಮಯ್ಯ ಒತ್ತಾಯಿಸಿದರು.

ADVERTISEMENT

‘ಅವರ ಸ್ಥಿತಿ ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಕೇಂದ್ರದ ನಾಯಕರೆಲ್ಲ ಸೇರಿ ಯಡಿಯೂರಪ್ಪ ರೆಕ್ಕೆ– ಪುಕ್ಕ ಕತ್ತರಿಸಿದ್ದಾರೆ’ ಎಂದು ಕಿಚಾಯಿಸಿದ್ದಾರೆ.

ತಂತಿ ಮೇಲಿಂದ ಇಳಿಸುತ್ತಾರೆ:

‘ಅತೃಪ್ತ ಶಾಸಕರನ್ನು ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ ಮುಖ್ಯಮಂತ್ರಿ ಪದವಿಗೆ ಏರಿದ ಯಡಿಯೂರಪ್ಪ ಅವರೇ, ತಂತಿ ಮೇಲಿಂದಲೇ ಪ್ರವಾಹ ಪೀಡಿತ ಪ್ರದೇಶದಲ್ಲಿ ಇರುವ ಜನರ ಕಡೆಗೂ ನೋಡಿ. ಮನೆ, ಮಠ ಕಳೆದುಕೊಂಡು ಬೀದಿಗೆ ಬಿದ್ದವರ ಬದುಕನ್ನು ನಿಮ್ಮ ಸರ್ಕಾರಕ್ಕೆ ಕಟ್ಟಿ ಕೊಡಲು ಸಾಧ್ಯವಾಗದಿದ್ದರೆ, ಜನರೇ ನಿಮ್ಮನ್ನು ತಂತಿ ಮೇಲಿಂದ ಇಳಿಸುತ್ತಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.

ಹತಾಶೆ:

‘ಮುಖ್ಯಮಂತ್ರಿ ಅಸಹಾಯಕರಾಗಿದ್ದು, ಹತಾಶೆಯಿಂದ ಹೇಳಿಕೆ ಕೊಡುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಲೂಟಿ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

ನೆರೆ ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಕೇಂದ್ರದಿಂದ ಈವರೆಗೂ ಒಂದು ರೂಪಾಯಿ ಪರಿಹಾರ ಬಿಡುಗಡೆ ಆಗಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿದ್ದೇ ಜನರಿಗೆ ಶಾಪವಾಗಿದೆ ಎಂದು ಟೀಕಿಸಿದರು.

ಅಸಹಾಯಕತೆ:

‘ನಿಮ್ಮ ಅಸಹಾಯಕತೆ ಅರ್ಥವಾಗುತ್ತದೆ. ನಿಮ್ಮ ನಾಯಕರಿಗೆ ಅಧಿಕಾರ ಹಿಡಿಯಲು ರಾಜ್ಯದ ಬೆಂಬಲ ಬೇಕಿತ್ತು. ಆದರೆ ನಿಮ್ಮ ಕಷ್ಟದಲ್ಲಿ ಪಾಲುದಾರಿಕೆ ಬೇಕಿಲ್ಲ’ ಎಂದು ಶಾಸಕ ಜಿ.ಪರಮೇಶ್ವರ ವ್ಯಂಗ್ಯವಾಡಿದ್ದಾರೆ.

‘ಪಕ್ಷ– ಸರ್ಕಾರ ನಿಭಾಯಿಸಲು ಹಗ್ಗದ ಮೇಲೆ ನಡೆಯುತ್ತಿರಬಹುದು. ಆದರೆ ನೆರೆ ಪರಿಹಾರ ವಿಷಯದಲ್ಲಿ ನಾವು ನಿಮ್ಮ ಜತೆಗೆ ಇದ್ದೇವೆ. ರಾಜ್ಯದ ಒಳಿತಿಗಾಗಿ ಹೋರಾಡಿ’ ಎಂದು ಸಲಹೆ ಮಾಡಿದ್ದಾರೆ.

ಬಿಎಸ್‌ವೈಗೆ ಬ್ರೇಕ್‌

ಹುಬ್ಬಳ್ಳಿ: ‘ತಂತಿ ಮೇಲೆ ನಡೆಯುತ್ತಿರುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯವಾದ ಮಾತು. ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಬಿಜೆಪಿ ಹೈಕಮಾಂಡ್‌ ಬಿಡುತ್ತಿಲ್ಲ. ಮುಂದೆಯೂ ಬಿಡುವುದಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

‘ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದ್ದಾಗಿನ ರಾಜಕೀಯ ಪರಿಸ್ಥಿತಿಯೇ ಈಗಲೂ ಇದೆ’ ಎಂದು ಹೇಳಿದರು.

ಬಿಎಸ್‌ವೈ ಎಲ್ಲವನ್ನೂ ನಿಭಾಯಿಸುತ್ತಾರೆ: ಸೋಮಣ್ಣ

ಮೈಸೂರು: ‘ಉಮೇಶ್‌ ಕತ್ತಿ ಯಾಕೆ ಹೀಗೆ ಮಾತನಾಡುತ್ತಾರೋ ಗೊತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮುಜುಗರ ಆಗುವಂತೆ ಮಾಡುವುದು ಎಷ್ಟು ಸರಿ? ಪದೇ ಪದೇ ತಲೆಬಿಸಿ ಮಾಡುವುದು ಸಮಂಜಸವಲ್ಲ’ ಎಂದು ಸಚಿವ ವಿ.ಸೋಮಣ್ಣ ಸೋಮವಾರ ಇಲ್ಲಿ ಪ್ರತಿಕ್ರಿಯಿಸಿದರು.

‘ಇನ್ನೊಬ್ಬರ ಮನಸ್ಸನ್ನು ನೋಯಿಸಿ ನಾವು ಏನೂ ಮಾಡಬಾರದು. ಅನರ್ಹ ಶಾಸಕರು ದೊಡ್ಡ ತ್ಯಾಗ ಮಾಡಿದ್ದಾರೆ. ಅವರನ್ನು ಗೌರವದಿಂದ ಕಾಣಬೇಕು. ಅವರ ತೀರ್ಮಾನದ ಹಿಂದೆ ದೊಡ್ಡ ಸಂದೇಶ ಇದೆ. ಉಮೇಶ್‌ ಕತ್ತಿ ಇವತ್ತಿನವರೆಗೆ ಹೇಳಿರುವುದೆಲ್ಲ ಸರಿ ಇದೆಯೇ? ಏನೋ ಒಂದು ಹೇಳುತ್ತಾರೆ; ಆ ಮೇಲೆ ಸರಿ ಹೋಗುತ್ತಾರೆ. ಈ ಸಂದರ್ಭದಲ್ಲಿ ಅನರ್ಹ ಶಾಸಕರ ಬಗ್ಗೆ ಮಾತನಾಡುವುದು ಉಚಿತವೂ ಅಲ್ಲ, ಅವಶ್ಯಕತೆಯೂ ಅಲ್ಲ’ ಎಂದರು.

ಅನರ್ಹರಿಗೆ ಟಿಕೆಟ್‌ ಖಚಿತ: ‘ಅನರ್ಹ ಶಾಸಕರಿಗೆ ಟಿಕೆಟ್ ನೀಡುತ್ತೇವೆ. ಯಾವುದೇ ಆತಂಕ ಬೇಡ. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಚರ್ಚೆ ನಡೆಸಿದ್ದೇನೆ. ಹಿಂದೆ ಅನರ್ಹ ಶಾಸಕರ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ ಪಕ್ಷದ ಅಭ್ಯರ್ಥಿಗಳಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು’ ಎಂದು ಯಡಿಯೂರಪ್ಪ ಭರವಸೆ ನೀಡಿದರು.

ಮುಖ್ಯಮಂತ್ರಿ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ; ಡಿಸಿಎಂ ಲಕ್ಷ್ಮಣ ಸವದಿ

ತುಮಕೂರು: 'ದಾವಣಗೆರೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೀಡಿದ ‘ತಂತಿ ಮೇಲಿನ ನಡಿಗೆ ನನ್ನದು’ ಎಂಬ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, 'ಗುಟ್ಕಾ ನಿಷೇಧ ಮಾಡಬೇಕು ಎಂಬ ವಿಚಾರ, ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರಗಳ ಕುರಿತಂತೆ ಪ್ರತಿಕ್ರಿಯಿಸುವಾಗ ಯಾವುದೇ ತೀರ್ಮಾನ ಕೈಗೊಂಡರು ಹತ್ತಾರು ಬಾರಿ ವಿಚಾರ ಮಾಡಿ ತೆಗೆದುಕೊಳ್ಳುತ್ತೇನೆ. ತಂತಿ ಮೇಲಿನ ನಡಿಗೆ ನನ್ನದು ಎಂದು ಹೇಳಿದ್ದಾರೆ. ಅದನ್ನು ಬೇರೆ ರೀತಿ ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಹೇಳಿದರು.

’ಬಿಜೆಪಿ ಸರ್ಕಾರವು ಮೂರುವರೆ ವರ್ಷ ಸುಭದ್ರವಾಗಿ ಅಧಿಕಾರದಲ್ಲಿರುತ್ತದೆ. ಆ ಬಗ್ಗೆ ಯಾವುದೇ ರೀತಿ ಅನುಮಾನ ಬೇಡ. ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರಕ್ಕೆ ಟಿಕೆಟ್ ಸಿಗುತ್ತೊ ಬಿಡುತ್ತೊ ಅದನ್ನು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ’ ಎಂದರು.

’ಬೆಳಗಾವಿ ಜಿಲ್ಲೆ ವಿಭಜನೆಗೆ ತಾಂತ್ರಿಕ ಅಡಚಣೆಗಳಿವೆ. ಎಂಇಎಸ್ ಸಂಘಟನೆಯವರು ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಆ ಕಾರಣದಿಂದ ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ತೀರ್ಮಾನ ಮಾಡುವುದು ನನೆಗುದಿಗೆ ಬಿದ್ದಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಶಿವಪ್ರಸಾದ್ ಇದ್ದರು.

‘ಹೋರಾಟದ ಹಿನ್ನೆಲೆಯದ್ದು’

ದಾವಣಗೆರೆ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೋರಾಟದ ಹಿನ್ನೆಲೆಯಿಂದ ಬಂದವರು. ಆ ಹಿನ್ನೆಲೆಯಲ್ಲಿ ತಮ್ಮದು ತಂತಿ ಮೇಲಿನ ನಡಿಗೆ ಎಂದು ಹೇಳಿದ್ದಾರೆಯೇ ಹೊರತು ಬೇರೆ ದೃಷ್ಟಿಯಿಂದ ಅಲ್ಲ’ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಪ್ರತಿಕ್ರಿಯಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಡಿಯೂರಪ್ಪ ಅಧಿಕಾರದಲ್ಲಿ ಇರಲಿ, ವಿಪಕ್ಷದಲ್ಲೇ ಇರಲಿ; ಹೋರಾಟವನ್ನೇ ಮೈಗೂಡಿಸಿಕೊಂಡವರು. ಹೀಗಾಗಿ ಆ ಮಾತನ್ನು ಹೇಳಿದ್ದಾರೆ’ ಎಂದು ಸಮರ್ಥಿಸಿಕೊಂಡರು.

ಕೆಲ ಪದಾಧಿಕಾರಿಗಳ ನೇಮಕ ಕುರಿತ ಪ್ರಶ್ನೆಗೆ, ‘ಯುವ ಮೋರ್ಚಾದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ‌ನಾನು ಈಗಲೂ ಪ್ರಧಾನ ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಉತ್ತರಿಸಿದರು.

ವರ್ಗಾವಣೆ ದಂಧೆ ಮಾಡಿಲ್ಲ: ‘ನಾನು ಯಾವುದೇ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿಲ್ಲ. ಯಡಿಯೂರಪ್ಪ ಅವರು ಹೋರಾಟ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದಾರೆ. ಅದರ ಅರಿವು ನನಗಿದೆ. ಆ ಸ್ಥಾನಕ್ಕೆ ಕಳಂಕ ತರುವ ಕೆಲಸ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಅಲ್ಪ ಬಹುಮತದ ಹಿನ್ನೆಲೆಯ ಹೇಳಿಕೆ: ಪ್ರಹ್ಲಾದ್‌ ಜೋಶಿ

ಪುತ್ತೂರು: ‘ಸರ್ಕಾರವು ಅಲ್ಪ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ತಂತಿ ಮೇಲಿನ ನಡಿಗೆ ನನ್ನದು’ ಎಂಬ ಹೇಳಿಕೆ ನೀಡಿರಬಹುದು’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಸೋಮವಾರ ಇಲ್ಲಿ ಸಮಜಾಯಿಷಿ ನೀಡಿದರು.

‘ವಿರೋಧ ಪಕ್ಷಗಳ ಒಟ್ಟು ಸದಸ್ಯರಿಗಿಂತ ಆಡಳಿತದಲ್ಲಿ ಕೇವಲ ನಾಲ್ಕು ಶಾಸಕರು ಮಾತ್ರ ಹೆಚ್ಚಿದ್ದಾರೆ. ಹೀಗಾಗಿ, ಅವರು ಹಾಗೆ ಹೇಳಿದ್ದಾರೆ. ಆದರೆ, ಮುಂದಿನ ಮೂರು ಮುಕ್ಕಾಲು ವರ್ಷಗಳೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಅಭ್ಯರ್ಥಿಗಳ ಆಯ್ಕೆ ಕುರಿತು ಮುಖ್ಯಮಂತ್ರಿಯವರು ಕೇಂದ್ರದ ವರಿಷ್ಠರ ಜೊತೆ ಚರ್ಚೆ ನಡೆಸುತ್ತಾರೆ. 12ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪಕ್ಷದ ಗೆಲುವು ನಿಶ್ಚಿತ’ ಎಂದು ಹೇಳಿದರು.

ಅನರ್ಹರ ಕೈಬಿಡುವುದಿಲ್ಲ: ಮಂಗಳೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಜೋಶಿ, ‘ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 17 ಮಂದಿಗೆ ನೀಡಿರುವ ಎಲ್ಲ ಭರವಸೆಗಳನ್ನೂ ಬಿಜೆಪಿ ಹೈಕಮಾಂಡ್‌ ಈಡೇರಿಸಲಿದೆ. ಈ ಹಂತದಲ್ಲಿ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.