ಬೆಂಗಳೂರು: ‘ರಾಜಧಾನಿಯಲ್ಲಿ ಮೂಲಸೌಕರ್ಯಗಳ ವಿಚಾರದಲ್ಲಿ ಚಿಕ್ಕಪುಟ್ಟ ಕೊರತೆಗಳು ಇರಬಹುದು. ಉದ್ಯಮಿಗಳು ಅಂತಹ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿ. ಬದಲಾಗಿ, ಸರ್ಕಾರಕ್ಕೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಬಾರದು’ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದರು.
ನವೋದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಮೂಲಸೌಕರ್ಯ ಕೊರತೆ ಇದೆ ಎಂದು ಟ್ವೀಟ್ ಮಾಡಿ, ಅಸಮಾಧಾನ ವ್ಯಕ್ತಪಡಿಸಿರುವ ಕಾರಣಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
‘ನವೋದ್ಯಮ ಸೇರಿದಂತೆ ಯಾವುದೇ ಉದ್ದಿಮೆಗಳಿಗೆ ಬೆಂಗಳೂರಿನಲ್ಲಿ ಇರುವ ಮೂಲಸೌಕರ್ಯ ಮತ್ತು ಪರಿಸರ ಜಾಗತಿಕ ಮಟ್ಟದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿಯೇ ಬೆಂಗಳೂರು ದೇಶದ ನವೋದ್ಯಮ ರಾಜಧಾನಿಯಾಗಿದೆ' ಎಂದು ಭಾನುವಾರ
ಸುದ್ದಿಗಾಗರರಿಗೆ ಪ್ರಶ್ನೆಗೆ ಅವರು ಉತ್ತರಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ ಭ್ರಷ್ಟಾಚಾರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ‘ಕೆಂಪಣ್ಣನವರು ಎಷ್ಟು ವರ್ಷಗಳಿಂದ ಗುತ್ತಿಗೆದಾರರಾಗಿದ್ದಾರೆ ಎನ್ನುವುದು ನನಗೆ ಗೊತ್ತು. ಇಷ್ಟು ವರ್ಷ ಸುಮ್ಮನಿದ್ದು ಈಗಷ್ಟೇ ಮಾತನಾಡುತ್ತಿದ್ದಾರೆ ಅಂದರೆ ಏನರ್ಥ? ಇವರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ಯಾರು ಬೇಕಾದರೂ ಊಹಿಸಬಹುದು’ ಎಂದರು.
‘ಭ್ರಷ್ಟಾಚಾರ ಇಲ್ಲವೇ ಇಲ್ಲ ಎನ್ನಲಾರೆ. ಆದರೆ, ಇದು 70 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಹುಟ್ಟುಹಾಕಿದ ರೋಗಗ್ರಸ್ತ ಸಂಸ್ಕೃತಿ. ಈಗ ಹೆಮ್ಮರವಾಗಿದೆ. ಇದನ್ನು ಕಿತ್ತು ಹಾಕಲೆಂದೇ ಪ್ರಧಾನಿ ನೇತೃತ್ವದಲ್ಲಿ ಉತ್ತರದಾಯಿತ್ವ ವ್ಯವಸ್ಥೆ ತರಲಾಗುತ್ತಿದೆ’ ಎಂದರು.
‘ಭ್ರಷ್ಟಾಚಾರ ಹತ್ತಿಕ್ಕಲೆಂದೇ ಡಿಜಿಟಲ್ ವ್ಯವಹಾರ ವ್ಯವಸ್ಥೆ ತರಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯೂ ಇಲ್ಲ. ಹೀಗಾಗಿಯೇ, ಜನರು ಆ ಪಕ್ಷವನ್ನು ಮೂಲೆಗೆ ತಳ್ಳಿದ್ದಾರೆ’ ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.
****
ಉದ್ಯಮಿಗಳಿಗೆ ಸರ್ಕಾರ ಯಥೇಚ್ಛ ಅನುಕೂಲಗಳನ್ನು ಒದಗಿಸುತ್ತಿದೆ. ಉದ್ಯಮಿಗಳೂ ಮೊದಲು ನಾವು ಭಾರತೀಯರು ಎಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು.
-ಡಾ.ಸಿ.ಎನ್. ಅಶ್ವತ್ಥ ನಾರಾಯಣ,ಐಟಿ ಮತ್ತು ಬಿಟಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.