ADVERTISEMENT

ರಾಮನಗರ ಘಟನೆ: ರೌಡಿ ಸಹೋದರನ ಅಟ್ಟಹಾಸ ಎಂದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 13:01 IST
Last Updated 3 ಜನವರಿ 2022, 13:01 IST
ಹೊಡೆದಾಡಲು ಮುಂದಾದ ಸಂಸದ ಡಿ.ಕೆ.ಸುರೇಶ್‌ ಮತ್ತು ಸಚಿವ ಸಿ.ಎನ್. ಅಶ್ವತ್ಥನಾರಾಯಣ
ಹೊಡೆದಾಡಲು ಮುಂದಾದ ಸಂಸದ ಡಿ.ಕೆ.ಸುರೇಶ್‌ ಮತ್ತು ಸಚಿವ ಸಿ.ಎನ್. ಅಶ್ವತ್ಥನಾರಾಯಣ   

ಬೆಂಗಳೂರು:ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎದುರೇ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಪ್ರಸಂಗ ಸೋಮವಾರ ನಡೆದಿದೆ. ಈ ಬಗ್ಗೆ ರಾಜ್ಯ ಬಿಜೆಪಿಯು ತನ್ನ ಅಧಿಕೃತ ಟ್ವಿಟರ್‌ ಪುಟದಲ್ಲಿ, ಕಾಂಗ್ರೆಸ್‌ ಪಕ್ಷ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ಸಂಸದ ಡಿ.ಕೆ. ಸುರೇಶ್‌ ವಿರುದ್ಧಕಿಡಿಕಾರಿದೆ.

ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ, ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಸಚಿವಅಶ್ವತ್ಥ ನಾರಾಯಣರ ಮಾತುಗಳಿಂದ ಆಕ್ರೋಶಗೊಂಡ ಸಂಸದ ಸುರೇಶ್, ಸಚಿವರತ್ತ ತೆರಳಿದರು. ಅತ್ತ ಅಶ್ವತ್ಥ ನಾರಾಯಣ ಅವರೂ ಕೆರಳಿದರು. ಈ ವೇಳೆ ಇಬ್ಬರು‌ ಕೈ ಕೈ ಮಿಲಾಯಿಸಲು ಮುಂದಾದರು. ಇದರ ಮಧ್ಯೆ ವಿಧಾನ‌ ಪರಿಷತ್ ಸದಸ್ಯ ಎಸ್. ರವಿ ಮೈಕ್‌ನಲ್ಲಿ‌ ಮಾತನಾಡಲು ಮುಂದಾದರು. ಇದಕ್ಕೆ ಅಶ್ವತ್ಥನಾರಾಯಣ ಅವಕಾಶ ನೀಡದಿದ್ದಾಗ, ರವಿ ಕೋಪದಿಂದ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು.

ಈ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ, 'ಕಾಂಗ್ರೆಸ್ ಸಂಸ್ಕೃತಿ ಎಂದರೆ ಗೂಂಡಾ ಸಂಸ್ಕೃತಿ ಎಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇರೆ ಬೇಕಿಲ್ಲ.ಒಬ್ಬ ಸಂಸದರಿಗೆ ರಾಜ್ಯದ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಹೇಗೆ ವರ್ತಿಸಬೇಕೆಂಬ ಪರಿಜ್ಞಾನವಿಲ್ಲದಿರುವುದು ವಿಪರ್ಯಾಸ.ಯಥಾ ರಾಜ ತಥಾ ಪ್ರಜಾ ಎಂಬಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವರ್ತಿಸುತ್ತಿರುವುದು ಖಂಡನೀಯ' ಎಂದು ಕಿಡಿಕಾರಿದೆ.

ಮತ್ತೊಂದು ಟ್ವೀಟ್‌ನಲ್ಲಿ, 'ರಾಮನಗರ ಜಿಲ್ಲೆ ಎಂದರೆ 'ಕನಕಪುರ ರಿಪಬ್ಲಿಕ್' ಎಂದು ಡಿಕೆ ಸಹೋದರರು ಭಾವಿಸಿದಂತಿದೆ. ನಿಮ್ಮ ಅಟ್ಟಹಾಸ, ದೌರ್ಜನ್ಯ, ರಾಜಕೀಯ ಮೇಲಾಟವನ್ನು ಎಲ್ಲ ಕಾಲಕ್ಕೂ ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ.ಸಾರ್ವಜನಿಕ ಸಭೆಯಲ್ಲಿ ಸಂಸದ‌ ಡಿ.ಕೆ.‌ ಸುರೇಶ್ ಹಾಗೂವಿಧಾನ‌ ಪರಿಷತ್ ಸದಸ್ಯ ಎಸ್. ರವಿ ಅವರ ವರ್ತನೆ ಅಕ್ಷಮ್ಯವಾದುದು' ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮುಂದುವರಿದು, 'ಬಂಡೆ ಕಲ್ಲುಗಳನ್ನೇ ನುಂಗಿ ನೀರು ಕುಡಿದ ಕನಕಪುದ ರೌಡಿ ಸಹೋದರರಲ್ಲೊಬ್ಬರು, ಮುಖ್ಯಮಂತ್ರಿಗಳಿದ್ದ ವೇದಿಕೆಯಲ್ಲೇ ಅಟ್ಟಹಾಸ ಮೆರೆದಿದ್ದಾರೆ, ಹಾಗಾದರೇ ಭೂಗತರಾಗಿ ಏನೇನು ಮಾಡಿರಬಹುದು!?' ಎಂದು ಪ್ರಶ್ನಿಸಿದೆ. ಹಾಗೆಯೇರೌಡಿ ಕೊತ್ವಾಲನ ಶಿಷ್ಯರ ವಿರುದ್ಧ ಅರಣ್ಯ ಇಲಾಖೆಯ ಅಧಿಕಾರಿಗಳು ಸಲ್ಲಿಸಿದ್ದ ಕ್ರಿಮಿನಲ್ ಮೊಕದ್ದಮೆಗಳೇ ರೌಡಿ ಡಿಕೆ ಸಹೋದರರ ಇತಿಹಾಸವನ್ನು ಹೇಳುತ್ತವೆ ಎಂದು #ರೌಡಿಡಿಕೆಬ್ರದರ್ಸ್‌ ಟ್ಯಾಗ್‌ ಬಳಸಿ ಉಲ್ಲೇಖಿಸಿದೆ.

'ಕನಕಪುರದ ನೈಸರ್ಗಿಕ ಸಂಪತ್ತೆಲ್ಲವೂ ಒಂದೇ ಕುಟುಂಬದ ಸ್ವತ್ತು ಎಂಬಂತೆ #ರೌಡಿಡಿಕೆಬ್ರದರ್ಸ್‌ ನೋಡಿಕೊಂಡಿದ್ದಾರೆ. ಅಧಿಕಾರದ ರುಚಿ ನೋಡುವುದಕ್ಕೆ ಮುನ್ನವೇ ಶ್ರೀಗಂಧದ ಕಳ್ಳಸಾಗಣೆ ಮಾಡುತ್ತಿದ್ದವರು ಈಗ ಸರ್ಕಾರಿ ಯಂತ್ರವನ್ನೇ ಬೆದರಿಸುವ ಉಡಾಫೆತನ ತೋರಿದ್ದಾರೆ. ಕರ್ನಾಟಕ ಲಾಲೂ ಕಾಲದ ಬಿಹಾರವಲ್ಲ ಎಂಬುದು‌ ನೆನಪಿರಲಿ' ಎಂದು ಎಚ್ಚರಿಸಿದೆ.

'ತೋಳ್ಬಲ, ಅಕ್ರಮ ಸಂಪತ್ತಿನ ಬಲದಿಂದ ಮೆರೆಯುತ್ತಿರುವ ಕನಕಾಸುರರು ಕರ್ನಾಟಕದ ಅಧಿಕಾರ ಹಿಡಿದು ಶಾಂತಿ ಕದಡುವ ಯತ್ನ ನಡೆಸುತ್ತಿದ್ದಾರೆ.ಇವರು ಅಧಿಕಾರಕ್ಕೆ ಬಂದರೆ, ಕಂಡ ಕಂಡ ಖಾಲಿ ಜಾಗಕ್ಕೆ ಬೇಲಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.ರಾಜ್ಯದ ಜನರು ಇಂತವರ ಕೈಗೆ ಎಂದಿಗೂ ಅಧಿಕಾರ ನೀಡಲಾರರು' ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.