ADVERTISEMENT

₹ 5 ಸಾವಿರ ಕೋಟಿ ವೆಚ್ಚದಲ್ಲಿ 150 ಐಟಿಐ ಮೇಲ್ದರ್ಜೆಗೆ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 20:04 IST
Last Updated 14 ಜುಲೈ 2021, 20:04 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ‘ರಾಜ್ಯದ 150 ಸರ್ಕಾರಿ ಐಟಿಐಗಳನ್ನು ₹ 5 ಸಾವಿರ ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ‘ಉದ್ಯೋಗ’ ಎಂಬ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ’ ಎಂದು ಕೌಶಲಾಭಿವೃದ್ಧಿ, ಜೀವನೋಪಾಯ, ಉದ್ಯಮಶೀಲತೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಈ ಉದ್ದೇಶಕ್ಕಾಗಿ ಟಾಟಾ ಟೆಕ್ನಾಲಜೀಸ್‌ ಸೇರಿ 20 ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸುಮಾರು ₹ 250 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಒದಗಿಸಲಾಗುತ್ತಿದೆ’ ಎಂದರು.

‘ಐಟಿಐಗಳಲ್ಲಿ 75 ಹಳೆಯ ಲ್ಯಾಬ್‌ಗಳಿದ್ದು, ಅವುಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇನ್ನು 75 ಕಡೆ ಲ್ಯಾಬ್‌ಗಳು ಇಲ್ಲ. ಅಂಥ ಕಡೆ ಲ್ಯಾಬ್‌ ಸ್ಥಾಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

ADVERTISEMENT

ಒಪ್ಪಂದಗಳು: ಐಟಿಐ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರಿಗೆ ಉದ್ಯೋಗ ಕಲ್ಪಿಸಲು ದೊಡ್ಡ ದೊಡ್ಡ ಕೈಗಾರಿಕೆಗಳ ಜತೆ ಕೈಜೋಡಿಸಿ ತರಬೇತಿ ನೀಡಲಾಗುವುದು. ಇದಕ್ಕೆ ಸಂಬಂಧಿಸಿ ಹಲವು ಕಂಪನಿಗಳ ಜತೆ ಮುಖ್ಯಮಂತ್ರಿ ಸಮ್ಮುಖದಲ್ಲಿ ಒಪ್ಪಂದ ಏರ್ಪಡಲಿದೆ’ ಎಂದರು.

ಉದ್ಯೋಗ ಮೇಳ: ‘ಆನ್‌ಲೈನ್‌ ಉದ್ಯೋಗ ಮೇಳಗಳನ್ನು ವರ್ಷವಿಡೀ ಹಮ್ಮಿಕೊಳ್ಳಲು ನಿಶ್ಚಯಿಸಲಾಗಿದ್ದು, ಅದಕ್ಕೂ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.