ADVERTISEMENT

ವಿದ್ಯಾರ್ಥಿ ವಿನಿಮಯ: ಪದವಿ, ಪಿಜಿಗೂ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 22:14 IST
Last Updated 16 ಮಾರ್ಚ್ 2022, 22:14 IST

ಬೆಂಗಳೂರು: ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಇರುವ ಟ್ವಿನ್ನಿಂಗ್ (ವಿದ್ಯಾರ್ಥಿ ವಿನಿಮಯ) ಯೋಜನೆಯನ್ನು ಪದವಿ, ಸ್ನಾತಕೋತ್ತರ ಪದವಿ (ಪಿಜಿ) ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅಮೆರಿಕದ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕುರಿತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬುಧವಾರ ಚರ್ಚೆ ನಡೆಸಿದರು.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದ ರಾಯಭಾರಿ ಕನ್ನಿಕಾ ಚೌಧರಿ ಮತ್ತು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ ಇದ್ದರು.

‘ಡಿಪ್ಲೊಮಾ ವಿದ್ಯಾರ್ಥಿಗಳು ಅಮೆರಿಕದ ಮಾಂಟ್ಗೊಮೆರಿ ಕೌಂಟಿ ಕಮ್ಯುನಿಟಿ ಕಾಲೇಜಿನಲ್ಲಿ ಓದುವ ಸಂಬಂಧ ಮಾಡಿಕೊಂಡಿದ್ದ ಒಪ್ಪಂದ ಅನುಷ್ಠಾನಕ್ಕೆ ಬಂದಿದೆ. ಅದನ್ನು ವಿಸ್ತರಿಸಬೇಕಾದ ಅಗತ್ಯವಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ADVERTISEMENT

‘ಉದ್ದೇಶಿತ ಗುರಿ ಸಾಧಿಸಬೇಕೆಂದರೆ ಅಮೆರಿಕದ ಅಥೆನ್ಸ್ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾದ ಯಾರ್ಕ್ ಕಾಲೇಜ್, ಹ್ಯಾರಿಸ್ ಬರ್ಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಇಂಡಿಯಾನಾ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ, ಹ್ಯೂಸನ್ ಯೂನಿವರ್ಸಿಟಿ, ಥಿಯಲ್ ಕಾಲೇಜು ಮತ್ತು ಅಲ್ವರ್ನಿಯಾ ಹಾಗೂ ಮಿಸರಿಕಾರ್ಡಿಯಾ ವಿಶ್ವವಿದ್ಯಾಲಯಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವುದು ಸೂಕ್ತ’ ಎಂದು ಕನ್ನಿಕಾ ತಿಳಿಸಿದರು.

‘ಟ್ವಿನ್ನಿಂಗ್ ಯೋಜನೆಯಡಿ ವಿದ್ಯಾರ್ಥಿಗಳನ್ನು ಪದವಿ, ಸ್ನಾತಕೋತ್ತರ ಪದವಿಯ ನಿರ್ದಿಷ್ಟ ವರ್ಷಗಳಲ್ಲಿ ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕಳುಹಿಸಿ ಕೊಡಲಾಗುವುದು. ವೇತನಸಹಿತ ಇಂಟರ್ನ್-ಶಿಪ್ ವ್ಯವಸ್ಥೆ ಇದರ ಭಾಗವಾಗಿರಲಿದೆ. ಅಲ್ಲದೆ, ಇಷ್ಟವಿರುವವರು ಅಮೆರಿಕದಲ್ಲೇ ಉದ್ಯೋಗಿಗಳಾಗಿ ನೆಲೆಯೂರಲು ಅವಕಾಶ ಇರಲಿದೆ’ ಎಂದು ಸಚಿವರು ವಿವರಿಸಿದರು.

ಒಡಂಬಡಿಕೆಗಳು ಜಾರಿಗೆ ಬಂದರೆ ಆರು ವರ್ಷಗಳ ಟ್ವಿನ್ನಿಂಗ್ ಡಿಗ್ರಿ, ಐದು ವರ್ಷಗಳ ಇಂಟಿಗ್ರೇಟೆಡ್ ಸ್ನಾತಕೋತ್ತರ ಪದವಿ, ನಾಲ್ಕು ವರ್ಷಗಳ ಟ್ವಿನ್ನಿಂಗ್ ಸ್ನಾತಕೋತ್ತರ ಪದವಿ, ಎಂ.ಎಸ್. ನರ್ಸಿಂಗ್ (ಇಂಟಿಗ್ರೇಟೆಡ್) ಮತ್ತು ಎಂ.ಎಸ್.ಬಯೋಕೆಮಿಸ್ಟ್ರಿ (ಇಂಟಿಗ್ರೇಟೆಡ್) ಪದವಿ ಹೊಂದಲು ಅವಕಾಶ ಸಿಗಲಿವೆ ಎಂದರು.

ಒಡಂಬಡಿಕೆ: ಇಂಗ್ಲಿಷ್ ಕಲಿಕೆ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಇಂಟಿಗ್ರೇಟೆಡ್ ಪದವಿಗೆ ಅವಕಾಶ ಕಲ್ಪಿಸಲು ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರ ಕುಲಪತಿ ಲಿಂಗರಾಜ ಗಾಂಧಿ ಮತ್ತು ಹ್ಯಾರಿಸ್ಬರ್ಗ್ ವಿಶ್ವವಿದ್ಯಾಲಯದ ಪರ ಕನ್ನಿಕಾ ಚೌಧರಿ ಆವರು ದಾಖಲಾತಿಗಳನ್ನು ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.