ADVERTISEMENT

ನ.14 ರಿಂದ ಕಲಬುರಗಿಯಲ್ಲಿ ಸಹಕಾರ ಸಪ್ತಾಹ: ಸಚಿವ ಎಸ್‌.ಟಿ.ಸೋಮಶೇಖರ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2022, 12:52 IST
Last Updated 19 ಅಕ್ಟೋಬರ್ 2022, 12:52 IST
   

ಬೆಂಗಳೂರು: 69 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಲಬುರಗಿಯಲ್ಲಿ ನ.14 ರಿಂದ 20 ರವರೆಗೆ ನಡೆಯಲಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಸಹಕಾರ ಸಪ್ತಾಹದ ಸಿದ್ಧತಾ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತ 75 ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ’ ಈ ಬಾರಿಯ ಘೋಷ ವಾಕ್ಯವಾಗಿದೆ ಹೇಳಿದರು.

ಅಲ್ಲದೇ, ನ 14 ರಂದು ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಅದೇ ದಿನ ಹಿರಿಯ ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನ. 20 ರಂದು ಮೈಸೂರಿನಲ್ಲಿ ಸಮಾರೋಪ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಈ ಬಾರಿ ‘ಸಹಕಾರ ರತ್ನ’ ಪ್ರಶಸ್ತಿಯನ್ನು ಆಯಾ ಜಿಲ್ಲೆಗಳಲ್ಲಿಯೇ ಪ್ರದಾನ ಮಾಡಲಾಗುವುದು. ದೂರದ ಸ್ಥಳಗಳಿಂದ ಬರಲು ತೊಂದರೆ ಆಗುವುದರಿಂದ ಆಯಾ ಭಾಗದ ಸಹಕಾರಿಗಳ ಮಧ್ಯೆಯೇ ಗೌರವಿಸಲಾಗುವುದು ಎಂದೂ ಅವರು ಹೇಳಿದರು.

ನಂದಿನಿ ಕ್ಷೀರಸಮೃದ್ಧಿ ಬ್ಯಾಂಕ್:

‘ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌’ ಸ್ಥಾಪನೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜತೆ ಮುಖ್ಯಮಂತ್ರಿಯವರು ಚರ್ಚೆ ನಡೆಸಿದ್ದಾರೆ. ಆರ್‌ಬಿಐಗೆ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿದೆ. ಆರ್‌ಬಿಐ ಅನುಮತಿಗೆ ಕೆಲವು ತಿದ್ದುಪಡಿ ಅವಶ್ಯಕವಾಗಿದ್ದು, ತಿದ್ದುಪಡಿ ಆದ ಬಳಿಕ ಜಾರಿಗೆಯಾಗಲಿದೆ ಎಂದು ತಿಳಿಸಿದರು.

ಯಶಸ್ವಿನಿ ಯೋಜನೆ ಮರು ಜಾರಿಗೆ ಅಗತ್ಯವಿರುವ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ನವೆಂಬರ್‌ 1 ಕ್ಕೆ ಮುಖ್ಯಮಂತ್ರಿಯವರು ಯೋಜನೆಯ ಜಾರಿಯನ್ನು ಪ್ರಕಟಿಸಲಿದ್ದಾರೆ ಎಂದರು.

ಇದಕ್ಕೂ ಮುನ್ನ ನಡೆದ ಸಹಕಾರ ಸಪ್ತಾಹದ ಸಿದ್ಧತಾ ಪೂರ್ವಭಾವಿ ಸಭೆಯಲ್ಲಿ ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಜಿ.ಟಿ.ದೇವೇಗೌಡ, ಶಾಸಕ ಶಿವಾನಂದ ಪಾಟೀಲ, ಸಹಕಾರ ಮಾರಾಟ ಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್, ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಶಂಕರ್ ಮುಂತಾದವರು ಇದ್ದರು.

***

ಹಾಲು ದರ ಹೆಚ್ಚಳಕ್ಕೆ ಮನವಿ

ಹಾಲಿನ ದರ ಹೆಚ್ಚಿಸಬೇಕು ಎಂದು 15 ಹಾಲು ಉತ್ಪಾದಕ ಸಂಘಗಳು ಮನವಿ ಮಾಡಿವೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ದರವನ್ನು ಹೆಚ್ಚಿಸಿದರೆ ರೈತರಿಗೆ ಹಣ ನೀಡುವುದಾಗಿ ಸಂಘಗಳು ತಿಳಿಸಿವೆ. ಆದರೆ, ಯಾವುದೇ ಕಾರಣಕ್ಕೂ ಹಾಲಿನ ದರ ಹೆಚ್ಚಿಸಬಾರದು ಎಂದು ಗ್ರಾಹಕರು ಒತ್ತಡ ಹಾಕುತ್ತಿದ್ದಾರೆ. ಈ ವಿಷಯ ಬಗ್ಗೆ ಮುಖ್ಯಮಂತ್ರಿಯವರ ಜತೆ ಚರ್ಚಿಸುತ್ತೇನೆ. ಈ ವಿಚಾರ ಮುಖ್ಯಮಂತ್ರಿಯವರ ಗಮನದಲ್ಲಿದ್ದು, ಸೂಕ್ತ ಕಾಲದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.