ADVERTISEMENT

ಶ್ರವಣದೋಷ ನಿವಾರಣೆಗೆ ಕಾಕ್ಲಿಯರ್ ಇಂಪ್ಲಾಂಟ್

500 ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲು ₹ 32 ಕೋಟಿ ಅನುದಾನ ಮೀಸಲು

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 16:10 IST
Last Updated 18 ಜೂನ್ 2022, 16:10 IST
   

ಬೆಂಗಳೂರು: ಆರು ವರ್ಷದೊಳಗಿನ ಮಕ್ಕಳಲ್ಲಿನ ಶ್ರವಣದೋಷ ಸಮಸ್ಯೆ ನಿವಾರಣೆಗೆ ಆರೋಗ್ಯ ಇಲಾಖೆಯು ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸಾ ಯೋಜನೆ ಹಮ್ಮಿಕೊಂಡಿದ್ದು, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಆವರಣದಲ್ಲಿಇದೇ ಸೋಮವಾರ ಚಾಲನೆ ಸಿಗಲಿದೆ.

‘ಶ್ರವಣದೋಷ ಸಮಸ್ಯೆಗೆ ಸಂಬಂಧಿಸಿದಂತೆ ಕಳೆದ ಸಾಲಿನಲ್ಲಿ 26,959 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು,2,959 ಮಕ್ಕಳಲ್ಲಿ ತೀವ್ರತರವಾದ ಕಿವುಡುತನ ಕಂಡುಬಂದಿದೆ. 2022-23ನೇ ಸಾಲಿನಲ್ಲಿ ತೀವ್ರ ಶ್ರವಣದೋಷ ಸಮಸ್ಯೆ ಇರುವ 500 ಮಕ್ಕಳಿಗೆಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಿ, ಅವರ ವಾಕ್–ಶ್ರವಣ ಶಕ್ತಿಯನ್ನು ಉತ್ತಮಪಡಿಸಲಾಗುತ್ತದೆ. ಇದಕ್ಕೆ ₹ 32 ಕೋಟಿ ಅನುದಾನ ಮೀಸಲಿಡಲಾಗಿದೆ.ಹೆಚ್ಚಿನ ಮಕ್ಕಳಿಗೆ ಕಿವುಡುತನವು ಹುಟ್ಟಿನಿಂದಲೇ ಬಂದಿರುತ್ತಿದೆ’ ಎಂದು ಇಲಾಖೆ ತಿಳಿಸಿದೆ.

‌‘ಹುಟ್ಟು ಕಿವುಡು ಸಮಸ್ಯೆ ಎದುರಿಸುತ್ತಿರುವವರಿಗೆ ಸರಿಯಾದ ಸಮಯದಲ್ಲಿ ತಪಾಸಣೆ ನಡೆಸಿ, ಸೂಕ್ತ ಶ್ರವಣ ಯಂತ್ರ ಅಳವಡಿಸಬೇಕು. ಅಷ್ಟಾಗಿಯೂ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ8 ತಿಂಗಳಿಂದ 5 ವರ್ಷದೊಳಗಿನ ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಬೇಕು.ಜಿಲ್ಲೆಗಳಲ್ಲಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು, ವೈದ್ಯಕೀಯ ಅಧೀಕ್ಷಕರ ಅಧ್ಯಕ್ಷತೆ ಸಮಿತಿಯು ಶ್ರವಣದೋಷ ಸಮಸ್ಯೆ ಇರುವ ಮಕ್ಕಳನ್ನು ಮೌಲ್ಯಮಾಪನ ನಡೆಸಲಿದೆ. ಬಳಿಕಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ’ ಎಂದು ಹೇಳಿದೆ.

ADVERTISEMENT

ಉಚಿತ ಚಿಕಿತ್ಸೆ:‘ಬೆಂಗಳೂರಿನ ಕೆ.ಸಿ. ಜನರಲ್, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ,ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಈ ಶಸ್ತ್ರಚಿಕಿತ್ಸೆಗೆ ಯೋಜನೆಯಡಿ ನೋಂದಾಯಿತವಾಗಿವೆ.ಇತರೆ ತೃತೀಯ ಆರೈಕ ಕೇಂದ್ರಗಳನ್ನು ವಿಭಾಗೀಯ ಮಟ್ಟದಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿಯಲ್ಲಿ ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಬ್ಬರಿಗೆ ಚಿಕಿತ್ಸಾ ಪ್ಯಾಕೇಜ್ ₹ 6.20 ಲಕ್ಷವಾಗಿದ್ದು,ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಭರಿಸಲಾಗುತ್ತದೆ’ ಎಂದು ಇಲಾಖೆ ವಿವರಿಸಿದೆ.

‘ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಕೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಒಂದು ವರ್ಷದ ಅವಧಿಯವರೆಗೆ ಪುನರ್ವಸತಿ ಸೌಲಭ್ಯ ಇರಲಿದೆ. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಟ್ರಸ್ಟ್ ಅಡಿಯಲ್ಲಿ ಭರಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.