ADVERTISEMENT

ಕೊಬ್ಬರಿ ಎಂಎಸ್‌ಪಿ ₹400 ಹೆಚ್ಚಳ: ಸಚಿವ ಸಂಪುಟ ಸಮಿತಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 14:16 IST
Last Updated 12 ಡಿಸೆಂಬರ್ 2025, 14:16 IST
ಉಂಡೆ ಕೊಬ್ಬರಿ
ಉಂಡೆ ಕೊಬ್ಬರಿ   

ನವದೆಹಲಿ: 2026ರ ಹಂಗಾಮಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ. 

ಮಿಲ್ಲಿಂಗ್ (ಚಿಕ್ಕ ಚಿಕ್ಕ ತುಂಡು) ಕೊಬ್ಬರಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹445 ಹೆಚ್ಚಿಸಿ ₹12,027ಕ್ಕೆ ನಿಗದಿಪಡಿಸಲಾಗಿದೆ. ಉಂಡೆ ಕೊಬ್ಬರಿಯ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ ₹400 ಹೆಚ್ಚಿಸಿ ₹12,500ಕ್ಕೆ ನಿಗದಿ ಮಾಡಲಾಗಿದೆ. ತೆಂಗಿನ ಬೆಳೆಗಾರರಿಗೆ ಉತ್ತಮ ಲಾಭ ಖಚಿತಪಡಿಸಲು ಮತ್ತು ತೆಂಗಿನ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಶಿಫಾರಸಿನ ಮೇರೆಗೆ ಕೊಬ್ಬರಿಯ ‘ನ್ಯಾಯಯುತ ಮತ್ತು ಸರಾಸರಿ ಗುಣಮಟ್ಟ’ಕ್ಕೆ ಎಂಎಸ್‌ಪಿ ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ನಫೇಡ್‌) ಹಾಗೂ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟವು (ಎನ್‌ಸಿಸಿಎಫ್) ಕೇಂದ್ರ ನೋಡಲ್ ಏಜೆನ್ಸಿಗಳಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತವೆ ಎಂದು ವೈಷ್ಣವ್ ಹೇಳಿದರು.

ADVERTISEMENT

2014ರಿಂದ ಕೇಂದ್ರ ಸರ್ಕಾರವು ಮಿಲ್ಲಿಂಗ್‌ ಕೊಬ್ಬರಿಯ ಎಂಎಸ್‌ಪಿಯನ್ನು ಗಣನೀಯವಾಗಿ ಹೆಚ್ಚಿಸಿದೆ. 2014ರ ಮಾರುಕಟ್ಟೆ ಋತುವಿನಲ್ಲಿ ಕ್ವಿಂಟಲ್‌ಗೆ ಎಂಎಸ್‌ಪಿ ₹5,250 ಇತ್ತು. ದಶಕದಲ್ಲಿ ಬೆಂಬಲ ಬೆಲೆ ಶೇ 129ರಷ್ಟು ಜಾಸ್ತಿ ಆಗಿದೆ. ಉಂಡೆ ಕೊಬ್ಬರಿಯ ಬೆಲೆಯು ಕ್ವಿಂಟಲ್‌ಗೆ ₹5,500ರಿಂದ ₹12,500ಕ್ಕೆ ಏರಿಕೆಯಾಗಿದ್ದು, ಶೇ 127ರಷ್ಟು ಹೆಚ್ಚಳವಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಬೆಳೆಗಾರರಿಗೆ ಲಾಭದಾಯಕ ಬೆಲೆ ಒದಗಿಸುವ ಸಲುವಾಗಿ ಸರ್ಕಾರವು 2018-19ರ ಬಜೆಟ್‌ನಲ್ಲಿ, ಎಲ್ಲ ಬೆಳೆಗಳ ಎಂಎಸ್‌ಪಿಯನ್ನು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಮಟ್ಟದಲ್ಲಿ ನಿಗದಿಪಡಿಸಲಾಗುವುದು ಎಂದು ಘೋಷಿಸಿತ್ತು ಎಂದು ಅವರು ನೆನಪಿಸಿದರು. 

ದೇಶದಲ್ಲಿ ಕೊಬ್ಬರಿ ಮಾರುಕಟ್ಟೆ ಋತುವು ಸಾಮಾನ್ಯವಾಗಿ ಜನವರಿಯಿಂದ ಏಪ್ರಿಲ್ ವರೆಗೆ ಇರುತ್ತದೆ. ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಅಧಿಕ ಪ್ರಮಾಣದಲ್ಲಿ ಕೊಬ್ಬರಿ ಉತ್ಪಾದನೆ ಆಗುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.