ADVERTISEMENT

ಕಾಫಿ ಹಣ್ಣು ಒಣಗಿಸಲು ಪರದಾಟ

ಜಿಟಿಜಿಟಿ ಸುರಿಯುವ ಮಳೆ: ಕಾಫಿ ಬೆಳೆಗಾರರ ಆತಂಕ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 18:03 IST
Last Updated 14 ಅಕ್ಟೋಬರ್ 2020, 18:03 IST
ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಸುರಿವ ಮಳೆಯಿಂದಾಗಿ ಕಾಫಿ ಹಣ್ಣು ಕೊಯ್ಯುವ ಸ್ಥಿತಿ ಬಂದಿದೆ
ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಜಿಟಿಜಿಟಿ ಸುರಿವ ಮಳೆಯಿಂದಾಗಿ ಕಾಫಿ ಹಣ್ಣು ಕೊಯ್ಯುವ ಸ್ಥಿತಿ ಬಂದಿದೆ   

ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ಬೆಳೆಗಾರರಲ್ಲಿ ಆತಂಕ ನಿರ್ಮಾಣ ಮಾಡಿದೆ.

ಕಾಫಿ ಹಣ್ಣು ಉದುರಿ ನೆಲಕಚ್ಚುತ್ತಿವೆ. ಕೆಲವೆಡೆ ಗದ್ದೆಗಳಲ್ಲಿ ಭತ್ತದ ತೆನೆ ಹೊಡೆ ಹೊರಟು ಕಾಳು ಜೊಳ್ಳಾಗುವ ಭೀತಿ ಉಂಟಾಗಿದೆ. ‘ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಳೆಗಾರರು 3 ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಕಂಗಾಲಾಗಿದ್ದಾರೆ.

ನೋಟ್ ಬ್ಯಾನ್‌ನಿಂದಾಗಿ ರೈತರು ತತ್ತರಿಸಿದ್ದಾರೆ. ಜತೆಗೆ ಈಗ ಕೋವಿಡ್-19 ನಿಂದಾಗಿ ಹತಾಶರಾಗಿದ್ದಾರೆ. ಆಗಸ್ಟ್- ಸೆಪ್ಟೆಂಬರ್ ತಿಂಗಳಿನಿಂದಲೇ ಕಾಫಿ ತೋಟಗಳಲ್ಲಿ ಕಟವಾಯಿ ಹಾಗೂ ರೋಬಸ್ಟ್ ಕಾಫಿ ಹಣ್ಣಾಗಿವೆ. 1 ಟಿನ್ ಹಣ್ಣು ಕೊಯ್ಯಲು ₹ 250 ರಿಂದ ₹ 300 ಸಂಬಳವನ್ನು ಕೂಲಿ ಕಾರ್ಮಿಕರಿಗೆ ನೀಡಬೇಕು. ಅದರ ಜತೆಗೆ ಕೊಯ್ಲು ಮಾಡಿರುವ ಹಣ್ಣುಗಳನ್ನು ಒಣಗಿಸುವುದಕ್ಕೆ ಮಳೆ ಬಿಡುವು ನೀಡುತ್ತಿಲ್ಲ ಎಂದು ದುಂಡಳ್ಳಿ ಗ್ರಾಮದ ಬೆಳೆಗಾರ ನಿವೃತ್ತ ಯೋಧ ಕೆ.ಟಿ.ಹರೀಶ್ ಅಳಲು ತೋಡಿಕೊಂಡರು.

ADVERTISEMENT

ನವೆಂಬರ್‌ ವೇಳೆಯಲ್ಲಿ ಕಾಫಿ ಹಣ್ಣು ಕೊಯ್ಯಲು ಆರಂಭಿಸುವುದು ವಾಡಿಕೆ. ಆದರೆ, ಅಕ್ಟೋಬರ್ ತಿಂಗಳಿನಲ್ಲಿ ಸುರಿಯುತ್ತಿರುವ ಮಳೆಗೆ ಕಾಫಿ ಹಣ್ಣು ಉದುರಿ ಹಾಳಾಗುತ್ತುವೆ. ಕಾಫಿ ಹಣ್ಣುಗಳನ್ನು ಕೊಯ್ಲು ಮಾಡದೇ ಇದ್ದರೆ ಹಾಳಾಗುತ್ತವೆ. ಕೊಯ್ಲು ಮಾಡಿದರೆ ಒಣಗಿಸುವ ಸಮಸ್ಯೆ. ವರ್ಷಾರಂಭದಲ್ಲಿ ಮಳೆಯಾಗಲಿಲ್ಲ, ವರ್ಷಾಂತ್ಯದಲ್ಲಿ ಸುರಿಯುತ್ತಾ ಬೆಳೆ ಹಾನಿಯಿಂದ ರೈತರ, ಬೆಳೆಗಾರರ ಬದುಕಿನಲ್ಲಿ ಹತಾಶೆ ಮೂಡಿಸುತ್ತಿದೆ ಎಂದು ಅವರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.