ADVERTISEMENT

ಹಾಸನ: ಬಾಳೆಹೊನ್ನೂರಿನ ಕಾಫಿ ಸಂಶೋಧನಾ ಸಂಸ್ಥೆಗೆ ನೂರರ ಸಂಭ್ರಮ

ನಾಳೆಯಿಂದ ಮೂರು ದಿನ ಬಾಳೆಹೊನ್ನೂರಿನಲ್ಲಿ ಶತಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2025, 0:30 IST
Last Updated 19 ಡಿಸೆಂಬರ್ 2025, 0:30 IST
<div class="paragraphs"><p>ಕಾಫಿ ಬೀಜ</p></div>

ಕಾಫಿ ಬೀಜ

   

(ಪ್ರಾತಿನಿಧಿಕ ಚಿತ್ರ)

ಹಾಸನ: ‘ಬಾಳೆಹೊನ್ನೂರಿನ ಕೇಂದ್ರ ಕಾಫಿ ಸಂಶೋಧನಾ ಕೇಂದ್ರದ (ಸಿಸಿಆರ್‌ಐ) ಶತಮಾನೋತ್ಸವದ ಅಂಗವಾಗಿ ಕಾಫಿ ಮಂಡಳಿ ವತಿಯಿಂದ ಡಿ. 20ರಿಂದ 22ರವರೆಗೆ ಮೂರು ದಿನಗಳ ಸಮಾವೇಶ ಹಮ್ಮಿಕೊಳ್ಳ ಲಾಗಿದೆ’ ಎಂದು ಕಾಫಿ ಮಂಡಳಿ ಸದಸ್ಯ ಉದಯ್ ಕುಮಾರ್ ತಿಳಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕಾಫಿ ಉದ್ಯಮದ ಸವಾಲು ಮತ್ತು ಪರಿಹಾರ, ತಾಂತ್ರಿಕ ಮತ್ತು ವೈಜ್ಞಾನಿಕ ಅಂಶಗಳನ್ನು ಒಳಗೊಳ್ಳುವ ಬಗ್ಗೆ,  ಮಾನವ ಪ್ರಾಣಿ ಸಂಘರ್ಷ, ವಿಶೇಷ ಕಾಫಿ ಮತ್ತು ಜಾಗತಿಕ ಮಾರುಕಟ್ಟೆ ವಿಷಯ ಸೇರಿ ಹತ್ತು ಚರ್ಚಾಗೋಷ್ಠಿ ಗಳು ನಡೆಯಲಿವೆ. ಸಮಗ್ರ ಕೃಷಿ ಆರ್ಥಿಕ ನಿರ್ವಹಣೆ, ಮಣ್ಣು ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಕಾಫಿ ಬೆಳೆಯುವ ವಿಧಾನ, ಕಾಫಿ ತೋಟಗಳ ನಿರ್ವಹಣೆ ಬಗ್ಗೆ ಕಾರ್ಯಾಗಾರಗಳು ನಡೆಯಲಿವೆ. ಇದೇ ವೇಳೆ, ಕಾಫಿಯ 2 ಹೊಸ ತಳಿ ಬಿಡುಗಡೆ ಮಾಡಲಾಗುತ್ತಿದೆ’ ಎಂದರು.

‘1925ರಲ್ಲಿ ಮೈಸೂರು ಮಹಾರಾಜರ ಆಡಳಿತ ಸಂದರ್ಭದಲ್ಲಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯು ಕಾಫಿ ಬೆಳೆಯಲ್ಲಿ ಎರಡು ಜಿ.ಐ. ಟ್ಯಾಗ್‌ಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಭಾರತೀಯ ಕಾಫಿಗೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ್ದರೂ ಬ್ರ‍್ಯಾಂಡಿಂಗ್ ಸಮಸ್ಯೆ ಇದೆ. ಭಾರತೀಯ ಕಾಫಿ ಬ್ರ‍್ಯಾಂಡಿಂಗ್ ಹೆಚ್ಚಿಸುವ ಬಗ್ಗೆಯೂ ಚರ್ಚಿಸಲಾ ಗುವುದು. ರಾಜ್ಯ, ಹೊರ ರಾಜ್ಯಗಳಿಂದ ಸಾವಿರಕ್ಕೂ ಹೆಚ್ಚು ಜನ ಭಾಗವಹಿಸ ಲಿದ್ದಾರೆ’ ಎಂದರು.

‘ಉದ್ಘಾಟನೆ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೇಂದ್ರ ವಾಣಿಜ್ಯ ಖಾತೆ ರಾಜ್ಯ ಸಚಿವ ಜಿತೇಂದ್ರ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಅರಣ್ಯ ಸಚಿವ ಈಶ್ವರ್ ಬಿ.ಖಂಡ್ರೆ ಸಮಾವೇಶ ಭಾಗವಹಿಸಲಿದ್ದಾರೆ’ ಎಂದರು.

7 ಲಕ್ಷ ಟನ್‌ಗೆ ಹೆಚ್ಚಿಸಲು ನೀಲನಕ್ಷೆ

‘ರಾಜ್ಯದಲ್ಲಿ ಸದ್ಯ 3.5 ಲಕ್ಷ ಟನ್ ಕಾಫಿ ಉತ್ಪಾದಿಸಲಾಗುತ್ತಿದ್ದು, 7 ಲಕ್ಷ ಟನ್ ಉತ್ಪಾದಿಸಲು ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಉದ್ಯಮಕ್ಕೆ ಬರುತ್ತಿರುವ ಯುವಜನರನ್ನು ಪ್ರೋತ್ಸಾಹಿಸಲು ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಉದಯ್ ಕುಮಾರ್ ಹೇಳಿದರು.

‘ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಸಂಸ್ಥೆಯಲ್ಲಿ ಅಧ್ಯಯನ ನಡೆದಿದ್ದು, ಕಾಫಿಯನ್ನು ಉತ್ಕೃಷ್ಟ ಗುಣಮಟ್ಟಕ್ಕೆ ಕೊಂಡೊಯ್ಯಲು ಮಾರ್ಗಸೂಚಿ ಮತ್ತು ಸಿದ್ಧತೆಗಳನ್ನು ನಡೆಸಲಾಗಿದೆ’ ಎಂದರು.

‘ಉತ್ಪಾದನೆ ಹೆಚ್ಚಿಸಲು ಕಾಫಿ ಬೆಳೆಯುವ ಜಾಗ ವಿಸ್ತರಿಸಬೇಕೆಂದೇನಿಲ್ಲ. ತಂತ್ರಜ್ಞಾನ ಸಹಿತ ತೋಟಗಳ ನಿರ್ವಹಣೆಯಲ್ಲಿ ಬದಲಾವಣೆ ಮಾಡಿಕೊಂಡರೆ ಇಳುವರಿಯನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಈ ಬಗ್ಗೆಯೂ ಸಮಾವೇಶದಲ್ಲಿ ಚರ್ಚೆಯಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.