ADVERTISEMENT

ರಾಜ್ಯದಲ್ಲಿ ‘ಚಳಿನಾರಾಯಣ’ನ ದರ್ಬಾರು: 13 ಡಿಗ್ರಿಗೆ ಕುಸಿದ ಉಷ್ಣಾಂಶ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2018, 4:52 IST
Last Updated 19 ಡಿಸೆಂಬರ್ 2018, 4:52 IST
ಚಾಮರಾಜನಗರ ದಟ್ಟ ಮಂಜಿನಿಂದ ಆವೃತವಾಗಿತ್ತು. ಚಳಿಯೂ ಜೋರಾಗಿತ್ತು (ಚಿತ್ರ: ಸಿ.ಆರ್. ವೆಂಕಟರಾಮು)
ಚಾಮರಾಜನಗರ ದಟ್ಟ ಮಂಜಿನಿಂದ ಆವೃತವಾಗಿತ್ತು. ಚಳಿಯೂ ಜೋರಾಗಿತ್ತು (ಚಿತ್ರ: ಸಿ.ಆರ್. ವೆಂಕಟರಾಮು)   

ಬೆಂಗಳೂರು: ನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬುಧವಾರ ಉಷ್ಣಾಂಶ ಕನಿಷ್ಠ ಪ್ರಮಾಣಕ್ಕೆ ಕುಸಿದಿದೆ. ಬುಧವಾರ ಮುಂಜಾನೆ ಬೆಳಗಾವಿ, ಕಲಬುರ್ಗಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ನಗರಗಳಲ್ಲಿ ಉಷ್ಣಾಂಶ 13 ಡಿಗ್ರಿ ಸೆಲ್ಷಿಯಸ್‌ಗೆ ಕುಸಿದಿತ್ತು.

ಗಡಿಯಾರ ಎಂಟು ಗಂಟೆ ತೋರಿಸಿದರೂ ಬೆಂಗಳೂರಿನಲ್ಲಿ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ದಾಟಿರಲಿಲ್ಲ. ಡಿಸೆಂಬರ್‌ನ ಚಳಿಗಾಲವಾದ ಕಾರಣ ಸೂರ್ಯನೂ ತುಸು ತಡವಾಗಿಯೇ ಕಣ್ಣುಬಿಟ್ಟ. ಪಂಚಾಂಗಗಳಲ್ಲಿ ಮತ್ತು ಹವಾಮಾನ ಮಾಹಿತಿ ನೀಡುವ ವೆಬ್‌ಸೈಟ್‌ಗಳಲ್ಲಿ ಬುಧವಾರ 6.36ಕ್ಕೆ ಸೂರ್ಯೋದಯ ಮತ್ತು 5.58ಕ್ಕೆ ಸೂರ್ಯಾಸ್ತವಿದೆ. ಆದರೆ 7 ಗಂಟೆಯಾದರೂ ನಗರದ ಕೇಂದ್ರ ಭಾಗದಲ್ಲಿ ಬೆಳಕು ಸ್ಪಷ್ಟವಾಗಿ ಮೂಡಿರಲಿಲ್ಲ. ನಗರದ ಹೊರವಲಯಗಳಲ್ಲಿ ಉಷ್ಣಾಂಶ 15 ಡಿಗ್ರಿ ಸೆಲ್ಷಿಯಸ್‌ ದಾಖಲಾಗಿತ್ತು.

ಬುಧವಾರ ಮುಂಜಾನೆ 8 ಗಂಟೆಗೆ ರಾಜ್ಯದ ವಿವಿಧ ನಗರಗಳ ಹವಾಮಾನ. ಕೃಪೆ: www.accuweather.com

ಚಳಿಯ ಪ್ರಭಾವದಿಂದ 7 ಗಂಟೆಯಾದರೂ ವಾಹನ ಸಂಚಾರ ವಿರಳವಾಗಿತ್ತು. ಕಾರ್ಪೊರೇಷನ್‌ ಸಮೀಪ ಒಂದಿಷ್ಟು ಜನರು ಚಳಿಯ ಹೊಡೆತ ಸಹಿಸಲಾಗದೆ ಕಸಕಡ್ಡಿಗಳನ್ನು ಗುಡ್ಡೆಹಾಕಿ ಬೆಂಕಿ ಕಾಯಿಸಿಕೊಳ್ಳುತ್ತಿದ್ದುದು ಕಂಡುಬಂತು. ಬಸ್ಸುಗಳಿಗೆ ಕಾಯುತ್ತಿದ್ದವರು ಬೆಂಕಿಯ ಆಸುಪಾಸಿನಲ್ಲೇ ನಿಲ್ಲಲು ಹವಣಿಸುತ್ತಿದ್ದರು. ಇಂದು ರಾತ್ರಿ ನಗರದಲ್ಲಿ ಉಷ್ಣಾಂಶ 15 ಡಿಗ್ರಿಗೆ ಕುಸಿಯುವ ಮುನ್ಸೂಚನೆ ಇದೆ.

ADVERTISEMENT

ರಾಜ್ಯ ಇತರ ಭಾಗಗಳಲ್ಲಿಯೂ ಚಳಿನಾರಾಯಣ ಜನರನ್ನು ನಡುಗಿಸುತ್ತಿದ್ದಾನೆ. ಹುಬ್ಬಳ್ಳಿ, ವಿಜಯಪುರ ನಗರಗಳಲ್ಲಿ 13, ಬೆಳಗಾವಿಯಲ್ಲಿ 14, ತುಮಕೂರಿನಲ್ಲಿ 15, ಮೈಸೂರಿನಲ್ಲಿ 17 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನೂ ಕೆಲ ದಿನಗಳು ಚಳಿಚಳಿ ವಾತಾವರಣ ಮುಂದುವರಿಯಲಿದೆ.

ಕಲಬುರ್ಗಿಯಲ್ಲಿ ತರಕಾರಿ ಮಾರುವವರು ಹೊದಿಗೆಗಳನ್ನೇ ಹೊದ್ದು ಬಂದಿದ್ದರು. (ಚಿತ್ರ: ಪ್ರಶಾಂತ್ ಎಚ್‌.ಜಿ.)

ಮಾರುಕಟ್ಟೆಯಲ್ಲಿ ಸೊಗಡವರೆ

ಚಳಿಗಾಲದಲ್ಲಿ ಜನರು ಇಷ್ಟಪಟ್ಟು ತಿನ್ನುವ ಅವರೆಕಾಯಿ ಈಗಾಗಲೇ ಮಾರುಕಟ್ಟೆಗೆ ಬಂದಿದೆ. ಗುಣಮಟ್ಟ ಮತ್ತು ಸೊಗಡು ಆಧರಿಸಿ ₹30ರಿಂದ ₹50ರ ಧಾರಣೆಯಲ್ಲಿ ಮಾರಾಟವಾಗುತ್ತಿದೆ. ‘ಈ ವರ್ಷ ಅವರೆಗೆ ಅನುಕೂಲವಾಗುವಂತೆ ಮಳೆಯಾಗಲಿಲ್ಲ. ಹೀಗಾಗಿ ಅವರೆಯಲ್ಲಿ ಸೊಗಡು ಕಡಿಮೆ’ ಎಂದು ದೊಡ್ಡಬಳ್ಳಾಪುರ ಎಪಿಎಂಸಿಯಲ್ಲಿ ಅವರೆಕಾಯಿ ಮಾರುತ್ತಿದ್ದ ಕಂಟನಕುಂಟೆ ಗ್ರಾಮದ ರೈತ ನಟರಾಜ ಅಭಿಪ್ರಾಯಪಟ್ಟರು.

ಕಲಬುರ್ಗಿಯಲ್ಲಿ ಪೌರ ಕಾರ್ಮಿಕರು ಚಳಿಕಾಯಿಸಿದ ವೈಖರಿ (ಚಿತ್ರ: ಪ್ರಶಾಂತ್ ಎಚ್‌.ಜಿ.)

ಧನುರ್ಮಾಸದ ಪೂಜೆ

ನಡುಗಿಸುವ ಚಳಿಯಿದ್ದರೂ ಧನುರ್ಮಾಸದ ಪೂಜೆಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿಲ್ಲ. ಅಯ್ಯಪ್ಪ ಸ್ವಾಮಿ ಮಾಲೆ ಹಾಕಿದವರು ಕೊರೆಯುವ ಚಳಿಯಲ್ಲಿಯೇ ತಣ್ಣೀರು ಸ್ನಾನ ಮಾಡಿ ಸಾಮೂಹಿಕ ಭಜನೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಸಂಜೆ ಚಾಟ್ಸ್‌ಗೆ ಡಿಮಾಂಡಪ್ಪೋ ಡಿಮಾಂಡು

ಸಂಜೆ ಬೇಗನೇ ಕತ್ತಲಾಗುವುದರ ಜೊತೆಗೆ ಚಳಿಯ ಪ್ರಭಾವವೂ ಇರುವುದರಿಂದ ಚಾಟ್ಸ್‌ ಅಂಗಡಿಗಳ ಮುಂದೆ ಪ್ರತಿದಿನ ಜನಜಾತ್ರೆ ಕಂಡು ಬರುತ್ತಿದೆ. ನಿತ್ಯ ಹಾಕುವುದಕ್ಕಿಂತ ತುಸು ಹೆಚ್ಚಾಗಿಸಿಯೇ ಕಾರ ಹಾಕಿಸಿಕೊಂಡು ಚುರುಮುರಿ, ಪಾನಿಪುರಿ, ಬೋಂಡಾ, ಬಜ್ಜಿ ಮೆಲ್ಲಲು ತಿಂಡಿಪೋತರು ಹಾತೊರೆಯುತ್ತಿದ್ದಾರೆ.

ಮೈಸೂರಿನಲ್ಲಿ ಚಳಿ ಲೆಕ್ಕಿಸದೆ ವಾಕಿಂಗ್ ಮುಗಿಸಿ ಕುಳಿತ ಮಹಿಳೆಯರು. (ಚಿತ್ರ: ಸವಿತಾ ಬಿ.ಆರ್.)

ಶೀತ ನೆಗಡಿ

ಮೆಟ್ರೊ ರೈಲು, ಬಿಎಂಟಿಸಿ ಬಸ್ಸುಗಳಲ್ಲಿ ಬಗೆಬಗೆ ಸ್ವೆಟರ್, ಟೋಪಿ, ಜರ್ಕಿನ್‌ಗಳು ರಾರಾಜಿಸುತ್ತಿವೆ. ಕಂಡಕ್ಟರ್‌ ರೈಟ್‌ರೈಟ್‌ ಜೊತೆಗೆ ಆಕ್ಷಿ ಹಾಕುವುದು, ಡ್ರೈವರಣ್ಣ ಸೊರಬುಸ ಎನ್ನುತ್ತಾ ಕಿರಿಕಿರಿ ಮಾಡುವ ಮೂಗಿಗೆ ಉಪಚಾರ ಮಾಡುವುದು ಸಾಮಾನ್ಯ ದೃಶ್ಯಗಳಾಗಿವೆ. ಚಳಿಗಾಲಕ್ಕೆ ಮುದುಡಿ ಮಲಗಿದ ಮಕ್ಕಳನ್ನು ಎಬ್ಬಿಸಿ ಶಾಲೆಗೆ ಕಳಿಸುವುದು ಹೆತ್ತವರ ಪಾಲಿನ ಕಡುಕಷ್ಟದ ಕೆಲಸ ಎನಿಸಿಬಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.