ಬೆಂಗಳೂರು: ಅಪರೂಪದ ನರರೋಗ ಎನಿಸಿರುವ ‘ಗುಯಿಲಿನ್ ಬಾರ್ ಸಿಂಡ್ರೋಮ್’ಗೆ (ಜಿಬಿಎಸ್) ಒಳಗಾಗಿ ಕೋಮಾ ಸ್ಥಿತಿಯಲ್ಲಿರುವ ವೈದ್ಯರೊಬ್ಬರು ಮೂರು ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳ ಹಣವನ್ನು ಡ್ರಾ ಮಾಡಿಕೊಳ್ಳಲು ಅವರ ಪತ್ನಿಗೆ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ರಾಜಾಜಿ ನಗರದಲ್ಲಿರುವ ವೈದ್ಯರ ಪತ್ನಿ, ಸಂಧ್ಯಾ ಅನಿಲ್ ಕುಮಾರ್ (55) ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಂಧ್ಯಾ ಅವರನ್ನು ಅನಿಲ್ ಕುಮಾರ್ ಅವರ ಕಾನೂನುಬದ್ಧ ಪಾಲಕಿಯಾಗಿ ನೇಮಿಸಿ ಆದೇಶಿಸಿದೆ.
ಅಂತೆಯೇ, ‘ಅನಿಲ್ ಕುಮಾರ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿವಮೊಗ್ಗ ಮತ್ತು ಬೆಂಗಳೂರು ಶಾಖೆಗಳಲ್ಲಿ ಹಾಗೂ ಬೆಂಗಳೂರಿನ ಮಹಾಲಕ್ಷ್ಮಿಪುರಂ ಶಾಖೆಯ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನಲ್ಲಿ ಹೊಂದಿರುವ ಬ್ಯಾಂಕ್ ಖಾತೆಗಳಿಂದ ಹಣ ಡ್ರಾ ಮಾಡಿಕೊಳ್ಳಲು ಸಂಧ್ಯಾ ಅವರಿಗೆ ಅನುಮತಿ ನೀಡಬೇಕು. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಕೂಡದು’ ಎಂದು ಬ್ಯಾಂಕುಗಳಿಗೆ ತಾಕೀತು ಮಾಡಿದೆ.
ಪ್ರಕರಣವೇನು?: ಡಾ.ಎಚ್.ವಿ.ಅನಿಲ್ ಕುಮಾರ್ 2024ರ ನವೆಂಬರ್ 12ರಂದು ಸೇವೆಯಿಂದ ನಿವೃತ್ತಿ ಹೊಂದುವ ಕೆಲವೇ ತಿಂಗಳ ಮೊದಲು ಅನಾರೋಗ್ಯಕ್ಕೆ ಒಳಗಾದರು. ಅವರು ಗುಯಿಲಿನ್ ಬಾರ್ ಸಿಂಡ್ರೋಮ್ ಎಂಬ ಅಪರೂಪದ ನರರೋಗದಿಂದ ಬಳಲುತ್ತಿದ್ದಾರೆ ಎಂದು ಬೆಂಗಳೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ನರವಿಜ್ಞಾನ ವಿಭಾಗದ ವೈದ್ಯರು ಪ್ರಮಾಣಿಕರಿಸಿದ್ದು ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಬೇಕು ಎಂದು 2024ರ ನವೆಂಬರ್ 29ರಂದು ಸೂಚಿಸಿದ್ದಾರೆ. ಹೀಗಾಗಿ, ಅವರಿಗೆ 2024ರ ಜೂನ್ 23ರಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಅರ್ಜಿದಾರರು ವಿವರಿಸಿದ್ದರು.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ವೆಂಕಟೇಶ್ ದೊಡ್ಡೇರಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.