ADVERTISEMENT

ಕರಾವಳಿಗರೇ ಬನ್ನಿ ಪೊಲೀಸ್ ಇಲಾಖೆಗೆ...

ಉಡುಪಿ, ದಕ್ಷಿಣ ಕನ್ನಡ, ಕಾರವಾರದಲ್ಲಿ ಯುವಕರನ್ನು ಸೆಳೆಯಲು ಅಭಿಯಾನ

ಬಾಲಚಂದ್ರ ಎಚ್.
Published 27 ಜೂನ್ 2019, 17:30 IST
Last Updated 27 ಜೂನ್ 2019, 17:30 IST
ಭಾಸ್ಕರ್ ರಾವ್‌, ಕೆಎಸ್‌ಆರ್‌ಪಿ ಎಡಿಜಿಪಿ
ಭಾಸ್ಕರ್ ರಾವ್‌, ಕೆಎಸ್‌ಆರ್‌ಪಿ ಎಡಿಜಿಪಿ   

ಉಡುಪಿ: ಕರಾವಳಿ ಭಾಗದ ಯುವಕ–ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರಬೇಕು ಎಂಬ ಉದ್ದೇಶದಿಂದ ‘ಕರಾವಳಿಗರೇ ಬನ್ನಿ ಪೊಲೀಸ್ ಇಲಾಖೆಗೆ’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಲಾಗಿದೆ.

ರಾಜ್ಯ ಮೀಸಲು ಪೊಲೀಸ್ ಪಡೆಯ ಎಡಿಜಿಪಿ ಭಾಸ್ಕರ್ ರಾವ್ ಅಭಿಯಾನದ ನೇತೃತ್ವ ವಹಿಸಿದ್ದು, ಕಾರವಾರ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಾಗಾರ ನಡೆಸುವ ಮೂಲಕ ಯುವ ಜನತೆಯನ್ನು ಇಲಾಖೆಯತ್ತ ಸೆಳೆಯಲು ಶ್ರಮಿಸುತ್ತಿದ್ದಾರೆ.

ಆಂದೋಲನದ ಉದ್ದೇಶ:ಕರಾವಳಿ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಗೆ ಸೇರುವವರ ಸಂಖ್ಯೆ ತೀರಾ ಕಡಿಮೆ. ಪ್ರತಿಬಾರಿ ಇಲ್ಲಿ ನೇಮಕಾತಿ ನಡೆದಾಗಲೂ ಶೇ 60ರಷ್ಟು ಮಂದಿ ಉತ್ತರ ಕರ್ನಾಟಕ ಹಾಗೂ ಇತರೆ ಜಿಲ್ಲೆಗಳ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ಈ ಅಸಮತೋಲನ ತಪ್ಪಿಸಲು, ಕರಾವಳಿಗರನ್ನು ಸೆಳೆಯಲು ಆಂದೋಲನ ಆರಂಭಿಸಲಾಗಿದೆ ಎಂದು ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಬೆಂಗಳೂರು, ಬಾಗಲಕೋಟೆ, ಗದಗ, ಬಿಜಾಪುರ ಸೇರಿದಂತೆ ಯಾವುದೇ ಜಿಲ್ಲೆಗಳಲ್ಲಿ ನೇಮಕಾತಿ ನಡೆದರೂ ಸ್ಥಳೀಯರು ನಿರೀಕ್ಷೆಗೂ ಮೀರಿ ಅರ್ಜಿ ಸಲ್ಲಿಸುತ್ತಾರೆ. ಆದರೆ, ಕರಾವಳಿಯಲ್ಲಿ ಮಾತ್ರ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಮುಂದೆ ಹೊರ ಜಿಲ್ಲೆಗಳ ಅಭ್ಯರ್ಥಿಗಳು ಅರ್ಜಿ ಹಾಕದಿದ್ದರೆ, ಹೊರ ರಾಜ್ಯದವರು ಕರಾವಳಿಯಲ್ಲಿ ಕೆಲಸಕ್ಕೆ ಸೇರುವ ಸ್ಥಿತಿ ಬರಬಹುದು ಎಂದು ಎಡಿಜಿಪಿ ಆತಂಕ ವ್ಯಕ್ತಪಡಿಸಿದರು.

ಉಡುಪಿ, ದಕ್ಷಿಣ ಕನ್ನಡ, ಕಾರವಾರ ಜಿಲ್ಲೆಗಳಲ್ಲಿ ಯುವಕರು ಪೊಲೀಸ್ ಇಲಾಖೆಗೆ ಸೇರದಿರಲು ನಿರಾಸಕ್ತಿ ಮಾತ್ರ ಕಾರಣವಲ್ಲ; ಮಾಹಿತಿ ಹಾಗೂ ತಿಳಿವಳಿಕೆ ಕೊರತೆಯೂ ಪ್ರಮುಖ ಕಾರಣ. ಹಾಗಾಗಿ, ಈ ಭಾಗದ ಮೀನುಗಾರ, ಕೊರಗ, ಮಲೆಕುಡಿಯ ಸಮುದಾಯದ ಯುವಕ ಯುವತಿಯರಿಗೆ ನಿರಂತರ ಮಾಹಿತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಬೆಳಗಾವಿ, ಹುಬ್ಬಳ್ಳಿಯ ತರಬೇತಿ ಕೇಂದ್ರಗಳಲ್ಲಿ ಸಿಗುವಂತಹ ಸವಲತ್ತುಗಳನ್ನು ಇಲ್ಲಿಯೂ ಉಚಿತವಾಗಿ ನೀಡಲಾಗುವುದು. ದೈಹಿಕ ಹಾಗೂ ಲಿಖಿತ ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ತಜ್ಞರು ಶಿಬಿರದಲ್ಲಿ ಮಾಹಿತಿ ನೀಡಲಿದ್ದಾರೆ. ಇಲಾಖೆಯಿಂದ ಸಿಗುವ ವೇತನ, ಸವಲತ್ತುಗಳ ಬಗ್ಗೆಯೂ ತಿಳಿಸಲಾಗುವುದು. ಮುಂದಿನವಾರ ಮಲ್ಪೆಯಲ್ಲಿ ಶಿಬಿರ ನಡೆಯಲಿದೆ ಎಂದು ಎಡಿಜಿಪಿ ತಿಳಿಸಿದರು.

ಕರಾವಳಿಯ ಯುವಕರಲ್ಲಿ ಕೌಶಲ, ಧೈರ್ಯ ಹೆಚ್ಚು. ಮೀನುಗಾರ ಸಮುದಾಯದವರ ಪ್ರಾಣ ಒತ್ತೆಯಿಟ್ಟು ಸಮುದ್ರಕ್ಕಿಳಿಯುತ್ತಾರೆ. ಇಂಥವರು ಇಲಾಖೆಗೆ ಬಂದರೆ ಕಾನೂನು ಸುವ್ಯವಸ್ಥೆ ಬಲಗೊಳ್ಳುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಕ್ಕರೆ, ಬೇರೆಡೆಗೆ ವಲಸೆ ಹೋಗುವುದು ತಪ್ಪಲಿದೆ ಎಂದು ಭಾಸ್ಕರ್ ರಾವ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.