
ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ನಡೆಸಿದ್ದ 2024ನೇ ಸಾಲಿನ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಮೊದಲ 10 ಸ್ಥಾನಗಳಲ್ಲಿ ಬೆಂಗಳೂರಿನ ಎಂಟು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಬೆಂಗಳೂರಿನ ಬಾಲಸತ್ಯ ಸರವಣನ್ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ದೇವಾಂಶ್ ತ್ರಿಪಾಠಿ, ಸನಾ ತಬಸ್ಸುಮ್, ಪ್ರಕೇತ್ ಗೋಯಲ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಹಿಮಾಚಲ ಪ್ರದೇಶದ ವಿದ್ಯಾರ್ಥಿ ಮಾನಸ್ ಸಿಂಗ್ ರಜಪೂತ್ ಐದು, ಆಂಧ್ರಪ್ರದೇಶದ ಗಣಿಪಿಸೆಟ್ಟಿ ನಿಶ್ಚಲ್ ಆರನೇ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ನಿಕೇತ್ ಪ್ರಕಾಶ್ ಅಚಂತಾ (ಏಳು) ನೇಹಾ ಪ್ರಭು (ಎಂಟು), ಜಗದೀಶ್ ರೆಡ್ಡಿ ಮಾರ್ಲಾ (ಒಂಬತ್ತು), ಈಶ್ವರಚಂದ್ರ ರೆಡ್ಡಿ ಮುಲ್ಕಾ 10ನೇ ಸ್ಥಾನ ಪಡೆದಿದ್ದಾರೆ. ಮೊದಲ 100 ಸ್ಥಾನಗಳಲ್ಲಿ 58 ವಿದ್ಯಾರ್ಥಿಗಳು ಕರ್ನಾಟಕದವರು.
ಕರ್ನಾಟಕದ 3,126 ಮಂದಿ ಸೇರಿ 10,575 ವಿದ್ಯಾರ್ಥಿಗಳು ಶೇ 90ರಿಂದ 100 ಪರ್ಸೆಂಟೈಲ್ ಗಳಿಸಿದ್ದಾರೆ. 10,538 ಅಭ್ಯರ್ಥಿಗಳು ಶೇ 80ರಿಂದ 90 ಹಾಗೂ 10,648 ಅಭ್ಯರ್ಥಿಗಳು 70 ಮತ್ತು 80 ಪರ್ಸೆಂಟೈಲ್ ಪಡೆದಿದ್ದಾರೆ.
ಈ ಬಾರಿಯೂ ಆನ್‌ಲೈನ್ ಮೂಲಕವೇ ಕೌನ್ಸೆಲಿಂಗ್ ನಡೆಸಲಾಗುವುದು. ವಿದ್ಯಾರ್ಥಿಗಳು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಬೇಕು. ಶುಲ್ಕ ವಿವರಗಳು ಮತ್ತು ಕೌನ್ಸೆಲಿಂಗ್ ದಿನಾಂಕಗಳನ್ನು www.comedk.org ನಲ್ಲಿ ವೀಕ್ಷಿಸಬಹುದು.
ಕರ್ನಾಟಕದ 150 ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಭಾರತದ 50ಕ್ಕೂ ಹೆಚ್ಚು ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಕಾಮೆಡ್-ಕೆ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ಮೇ 12ರಂದು ಪರೀಕ್ಷೆ ನಡೆಸಿತ್ತು. 28 ರಾಜ್ಯಗಳು, 189 ನಗರಗಳು ಮತ್ತು 264 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಕರ್ನಾಟಕದ 35,124 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 1,03,799 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.