ADVERTISEMENT

ತಾಲ್ಲೂಕಿಗೊಂದು ಜಾತಿಯ ಹಂಗಿಲ್ಲದ ಹಾಸ್ಟೆಲ್‌

ಮುಖ್ಯಮಂತ್ರಿಗೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಪ್ರಸ್ತಾವ

ಮಂಜುನಾಥ್ ಹೆಬ್ಬಾರ್‌
Published 3 ಜನವರಿ 2019, 20:20 IST
Last Updated 3 ಜನವರಿ 2019, 20:20 IST
   

ಬೆಂಗಳೂರು: ಜಾತಿಯ ಹೆಸರಿನಲ್ಲಿರುವ ವಿದ್ಯಾರ್ಥಿ ನಿಲಯಗಳು ಕಂದಕ ಸೃಷ್ಟಿಸುತ್ತಿರುವುದನ್ನು ತಡೆಯಲು ಮುಂದಾಗಿರುವ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ, ಎಲ್ಲ ತಾಲ್ಲೂಕುಗಳಲ್ಲೂ ‘ಮಾದರಿ ಸಾರ್ವಜನಿಕ ವಿದ್ಯಾರ್ಥಿನಿಲಯ’ ಸ್ಥಾಪಿಸಲು ಮುಂದಡಿ ಇಟ್ಟಿದೆ.

ಈ ಸಂಬಂಧ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಯೋಜನೆಯ ಪರಿಕಲ್ಪನೆ ವಿವರಿಸುವ ವರದಿ ಸಲ್ಲಿಸಿದ್ದಾರೆ.

ಈ ಹಾಸ್ಟೆಲ್‌ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವಿದ್ಯಾರ್ಥಿಗಳು ಎಂಬ ಬೇಧಭಾವವಿಲ್ಲದೆ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಒದಗಿಸಲಾಗುತ್ತದೆ. ‘ಜಿಲ್ಲೆಗೊಂದು ಹಾಸ್ಟೆಲ್‌ ಬದಲು ತಾಲ್ಲೂಕಿಗೊಂದು ಹಾಸ್ಟೆಲ್‌ ಆರಂಭಿಸುವುದು ಉತ್ತಮ. ಪ್ರತಿ ಹಾಸ್ಟೆಲ್‌ನಲ್ಲಿ 250ರಿಂದ 300 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಿಸಬೇಕು’ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಈ ಯೋಜನೆ ಘೋಷಿಸಲು ಸಿದ್ಧತೆ ನಡೆಸಲಾಗಿದೆ.

ADVERTISEMENT

ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳು ಪ್ರತ್ಯೇಕ ಹಾಸ್ಟೆಲ್‌ಗಳನ್ನು ನಡೆಸುತ್ತಿವೆ. ‘ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಒಂದು ಕಡೆ ಇರುತ್ತಾರೆ. ಹಿಂದುಳಿದ ವಿದ್ಯಾರ್ಥಿಗಳು ಇನ್ನೊಂದು ಕಡೆ ಇರುತ್ತಾರೆ. ಇದರಿಂದಾಗಿ, ಸರ್ಕಾರವೇ ಜಾತಿಯ ಭಾವನೆ ಬಿತ್ತಿದಂತಾಗುತ್ತದೆ’ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದರು.

2018ರ ಜುಲೈ ತಿಂಗಳಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆದಿತ್ತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ ಕೃಷಿ ಸಚಿವ ಎನ್‌.ಎಚ್. ಶಿವಶಂಕರ ರೆಡ್ಡಿ, ‘ಎಲ್ಲ ಸಮುದಾಯಗಳಿಗೂ ಪ್ರವೇಶಾವಕಾಶವಿರುವ ಒಂದು ಸಾಮಾನ್ಯ ವಿದ್ಯಾರ್ಥಿ ನಿಲಯ ಪರಿಕಲ್ಪನೆ ಇಂದಿನ ದಿನಗಳಲ್ಲಿ ಪ್ರಸ್ತುತ. ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಸಂಕುಚಿತ ಭಾವನೆ ಮಕ್ಕಳಲ್ಲಿ ಮೂಡುವುದನ್ನು ತಪ್ಪಿಸಿದಂತಾಗುತ್ತದೆ’ ಎಂದಿದ್ದರು.

ಇದಕ್ಕೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಧ್ವನಿಗೂಡಿಸಿದ್ದರು. ಈ ಸಂಬಂಧ 15 ದಿನಗಳಲ್ಲಿ ಪ್ರಸ್ತಾವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದರು.

ಪ್ರಸ್ತುತ ರಾಜ್ಯದಲ್ಲಿ 3,500 ಹಾಸ್ಟೆಲ್‌ಗಳು ಇವೆ. ಇವುಗಳಲ್ಲಿ ಕೆಲವು ಹಾಸ್ಟೆಲ್‌ಗಳನ್ನು ಮಾದರಿ ವಿದ್ಯಾರ್ಥಿ ನಿಲಯಗಳನ್ನಾಗಿ ಪರಿವರ್ತಿಸುವುದೋ ಅಥವಾ ಹೊಸ ಹಾಸ್ಟೆಲ್‌ಗಳನ್ನು ನಿರ್ಮಿಸುವುದೋ ಎಂಬ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ.

ಸಂಪನ್ಮೂಲ ಕ್ರೋಡೀಕರಣ ಹೇಗೆ?

ಈ ಹಾಸ್ಟೆಲ್‌ಗೆ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ತಲಾ ಶೇ 25 ಮೊತ್ತ ಭರಿಸಬೇಕು. ಶಿಕ್ಷಣ ಇಲಾಖೆಯ ಮೇಲ್ವಿಚಾರಣೆಯಲ್ಲೇ ಈ ಹಾಸ್ಟೆಲ್‌ ನಡೆಯಬೇಕು ಎಂದು ಪ್ರಿಯಾಂಕ್‌ ಖರ್ಗೆ ವರದಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.