ಬೆಂಗಳೂರು: ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಿಭಾಗದ 11 ನೇ ಸಮ್ಮೇಳನ ಸೆ.11 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸೆ.11 ರ ಸಂಜೆ 5.30 ಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಸೆ.12 ಮತ್ತು 13 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಮ್ಮೇಳನ ನಡೆಯಲಿದ್ದು, ವಿವಿಧ ರಾಜ್ಯಗಳ ವಿಧಾನಸಭಾಧ್ಯಕ್ಷರು, ಉಪಸಭಾಧ್ಯಕ್ಷರು, ಸಭಾಪತಿಗಳು ಮತ್ತು ಉಪಸಭಾಪತಿಗಳು, ಲೋಕಸಭೆ ಮತ್ತು ರಾಜ್ಯಸಭೆಯ ಮಹಾಕಾರ್ಯದರ್ಶಿಗಳು, ವಿವಿಧ ರಾಜ್ಯಗಳ ವಿಧಾನಸಭೆ, ಪರಿಷತ್‌ಗಳ ಕಾರ್ಯದರ್ಶಿ, ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸೆ.14 ರಂದು ಗಣ್ಯರಿಗೆ ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳಿಗೆ ಪ್ರವಾಸ ಆಯೋಜಿಸಲಾಗಿದೆ ಎಂದು ಹೇಳಿದರು.
ಕಾಮನ್‌ವೆಲ್ತ್ ರಾಷ್ಟ್ರಗಳ 9 ಮಂದಿಗೆ ಲೋಕಸಭಾ ಸ್ಪೀಕರ್ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ. ಅಲ್ಲದೇ, ಸಮ್ಮೇಳನದಲ್ಲಿ ಚರ್ಚಿಸಬಹುದಾದ ವಿಷಯಗಳ ಪಟ್ಟಿಯನ್ನು ಲೋಕಸಭಾ ಸ್ಪೀಕರ್ ಅವರಿಗೆ ಕಳುಹಿಸಿದ್ದು, ವಿಷಯ ಪಟ್ಟಿ ಅಂತಿಮಗೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಇದ್ದರು.
‘ಸಂವಿಧಾನಬದ್ಧವಾಗಿದ್ದರೆ ಯಾರೂ ಉದ್ಘಾಟಿಸಬಹುದು’:
‘ದಸರಾ ಉದ್ಘಾಟನೆ ಸಂವಿಧಾನಕ್ಕೆ ಅನುಗುಣವಾಗಿದ್ದರೆ ಸರ್ಕಾರದ ತೀರ್ಮಾನವನ್ನು ನಾವು ಒಪ್ಪಬೇಕು. ಈ ಬಗ್ಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಪರ–ವಿರೋಧ ಮಾತನಾಡಲಿ. ಆದರೆ ಸಂವಿಧಾನಕ್ಕೆ ಬದ್ಧವಾಗಿ ಇದೆಯಾ ಇಲ್ಲವಾ ಎಂಬುದನ್ನು ನೋಡಬೇಕು ಅಷ್ಟೇ’ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸುವುದನ್ನು ಬಿಜೆಪಿ ಶಾಸಕರು ವಿರೋಧಿಸುತ್ತಿರುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಖಾದರ್ ಪ್ರತಿಕ್ರಿಯಿಸಿದರು. ‘ಸಂವಿಧಾನ ಪ್ರಕಾರವಿದ್ದರೆ ಯಾವುದೂ ತಪ್ಪು ಅಲ್ಲ. ಯಾರು ಬೇಕಾದರೂ ದಸರಾ ಉದ್ಘಾಟಿಸಬಹುದು’ ಎಂದು ಹೇಳಿದರು. ಎಸ್‌ಐಟಿ ವರದಿ ಬರಲಿ: ‘ಧರ್ಮಸ್ಥಳದ ಪ್ರಕರಣದಲ್ಲಿ ಎಸ್ಐಟಿ ತನಿಖಾ ವರದಿ ಬರುವವರೆಗೆ ಯಾರೂ ನ್ಯಾಯಾಧೀಶರಾಗುವುದು ಬೇಡ. ದೇವಸ್ಥಾನ ಮತ್ತು ಕ್ಷೇತ್ರದ ಪಾವಿತ್ರ್ಯ ಮುಖ್ಯ. ಅಲ್ಲಿನ ಶಿಕ್ಷಣ ಸಂಸ್ಥೆಯ ಗೌರವ ಉಳಿಯುವುದು ಮುಖ್ಯ. ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಕಷ್ಟ. ಕಪ್ಪು ಚುಕ್ಕೆ ಇಡುವುದು ಸುಲಭ. ಎಸ್‌ಐಟಿ ತನಿಖೆ ವರದಿ ಬರುವವರೆಗೆ ಎಲ್ಲರೂ ಕಾಯಬೇಕು. ಆಮೇಲೆ ಬೇಕಿದ್ದರೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿ’ ಎಂದು ಖಾದರ್ ಹೇಳಿದರು.
ನಾಯಿಗಳ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ: ಖಾದರ್
ವಿಧಾನಸೌಧದ ಆವರಣದಲ್ಲಿರುವ ನಾಯಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿದ್ದೇವೆ. ಸರ್ಕಾರಿಂದ ಅನುಮತಿ ಸಿಕ್ಕಿದರೆ ನಾಯಿಗಳ ಪ್ರತ್ಯೇಕ ನಿರ್ವಹಣೆಗೆ ವ್ಯವಸ್ಥೆ ಮಾಡಲು ತೀರ್ಮಾನಿಸುತ್ತೇವೆ ಎಂದು ಯು.ಟಿ.ಖಾದರ್ ತಿಳಿಸಿದರು. ವಿಧಾನಸೌಧದ ಆವರಣದಲ್ಲಿ 53 ನಾಯಿಗಳಿವೆ. ಇವುಗಳು ವಿಧಾನಸೌಧದ ಒಳಗೆ ಬಾರದಂತೆ ತಡೆಯಲು ಗೇಟ್ ವ್ಯವಸ್ಥೆ ಇಲ್ಲ ಎಂದು ಹೇಳಿದರು. ಶಾಸಕರು ಬೆಳಗ್ಗಿನ ವೇಳೆ ವಾಕಿಂಗ್ ಮಾಡಲು ಮತ್ತು ಸಾರ್ವಜನಿಕರಿಗೆ ಈ ನಾಯಿಗಳಿಂದ ತೊಂದರೆ ಆಗುತ್ತಿದೆ. ಆದ್ದರಿಂದ ನಾಯಿಗಳ ರಕ್ಷಣೆಗೆ ಶೆಡ್ ನಿರ್ಮಾಣ ಮಾಡುವ ಆಲೋಚನೆ ಇದೆ. ಅಲ್ಲದೇ ಎನ್‌ಜಿಒಗಳ ಮೂಲಕ ಸಾಕುವ ವ್ಯವಸ್ಥೆ ಮಾಡುವ ವಿಚಾರವೂ ಚರ್ಚೆಯಾಗಿದೆ. ಈ ಕುರಿತ ಎಲ್ಲ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದ್ದೇವೆ. ಸರ್ಕಾರ ಒಪ್ಪಿಗೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.