ADVERTISEMENT

ಅಭಿವೃದ್ಧಿ ನೆಪ, ಪ್ರಧಾನಿ ಮೋದಿಯಿಂದ ಖಾಸಗಿಯವರಿಗೆ ನೆರವು: ಪ್ರಕಾಶ್ ಕಾರಟ್

ಸಿಪಿಎಂ 23ನೇ ರಾಜ್ಯ ಸಮ್ಮೇಳನದಲ್ಲಿ ಪ್ರಕಾಶ್ ಕಾರಟ್ ಆರೋಪ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 17:19 IST
Last Updated 2 ಜನವರಿ 2022, 17:19 IST
ಗಂಗಾವತಿಯಲ್ಲಿ ಭಾನುವಾರ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಪಕ್ಷದ ಪಾಲಿಟ್ ಬ್ಯುರೊ ಸದಸ್ಯ ಪ್ರಕಾಶ್ ಕಾರಟ್ ಮಾತನಾಡಿದರು– ಪ್ರಜಾವಾಣಿ ಚಿತ್ರ
ಗಂಗಾವತಿಯಲ್ಲಿ ಭಾನುವಾರ ನಡೆದ ಸಿಪಿಎಂ ರಾಜ್ಯ ಸಮ್ಮೇಳನದಲ್ಲಿ ಪಕ್ಷದ ಪಾಲಿಟ್ ಬ್ಯುರೊ ಸದಸ್ಯ ಪ್ರಕಾಶ್ ಕಾರಟ್ ಮಾತನಾಡಿದರು– ಪ್ರಜಾವಾಣಿ ಚಿತ್ರ   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ನವ ಭಾರತ ನಿರ್ಮಾಣದ ಹೆಸರಿನಲ್ಲಿ ಪ್ರಧಾನಿ ಮೋದಿ ಖಾಸಗಿ ಕಂಪನಿಗಳನ್ನು ಆರ್ಥಿಕವಾಗಿ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ಸದಸ್ಯ ಪ್ರಕಾಶ್ ಕಾರಟ್ ಭಾನುವಾರ ಆರೋಪಿಸಿದರು.

ನಗರದಲ್ಲಿ ನಡೆದ ಭಾರತ ಕಮ್ಯುನಿಸ್ಟ್‌ ಪಕ್ಷದ (ಮಾರ್ಕ್ಸ್‌ವಾದ) 23ನೇ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕೋವಿಡ್ ಸಂದರ್ಭದಲ್ಲಿ ಜನ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರಗಳು ಸೂಕ್ತ ಪರಿಹಾರ ನೀಡಲಿಲ್ಲ. ಬೆಲೆ ಏರಿಕೆ ಮಾಡಿ ಜನರಿಗೆ ಆರ್ಥಿಕ ಹೊರೆ ಹೊರಿಸಿವೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನ ನಿಲ್ದಾಣ, ಬಂದರು, ರಸ್ತೆ ಸೇರಿ ಸರ್ಕಾರಿ ಆಸ್ತಿಗಳನ್ನು ಖಾಸಗಿ ಒಡೆತನಕ್ಕೆ‌ ನೀಡಿ, ಹಣ ಪಡೆದು ಪಕ್ಷದ ಆಡಳಿತ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ರೈತರ ಅಭಿವೃದ್ಧಿ ನೆಪದಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆ ಜಾರಿ ಮಾಡಿತು. ವಿರೋಧವಿದ್ದರೂ ಸಮರ್ಥಿಸಿಕೊಂಡಿತು. ಕೊನೆಗೆ ಕ್ಷಮೆಯಾಚಿಸಿ, ಹಿಂಪಡೆಯಿತು. ಆದರೆ, ಕರ್ನಾಟಕ ಸರ್ಕಾರ ಇನ್ನೂ ಹಿಂಪಡೆದಿಲ್ಲ’ ಎಂದರು.

‘ಆರ್‌ಎಸ್‌ಎಸ್‌ ಹಾಗೂ ಬಂಡವಾಳಶಾಹಿ ಪಕ್ಷಗಳು ಮುಸ್ಲಿಂ, ಕ್ರೈಸ್ತರು ಹಾಗೂ ಎಡ ಪಕ್ಷಗಳನ್ನು ಗುರಿಯಾಗಿಸಿಕೊಂಡಿದ್ದು, ಈಗ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತಿವೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.