ADVERTISEMENT

ಸಂಕಟ ಶಮನಕ್ಕೆ ಸಾಮೂಹಿಕ ಬೇಸಾಯ

ಚಾಮರಾಜನಗರದಲ್ಲೊಂದು ಪ್ರಯೋಗ: 15 ರೈತರಿಂದ ಒಂದೂವರೆ ತಿಂಗಳಿನಿಂದ ಕೃಷಿ

ಸೂರ್ಯನಾರಾಯಣ ವಿ
Published 9 ಜೂನ್ 2019, 19:46 IST
Last Updated 9 ಜೂನ್ 2019, 19:46 IST
ಜಮೀನಿನಲ್ಲಿ ಬೆಳೆಯಲಾಗಿರುವ ವಿವಿಧ ಬೆಳೆಗಳು
ಜಮೀನಿನಲ್ಲಿ ಬೆಳೆಯಲಾಗಿರುವ ವಿವಿಧ ಬೆಳೆಗಳು   

ಚಾಮರಾಜನಗರ: ರೈತರ ಸಂಕಟ ದೂರ ಮಾಡುವ, ರೈತರ ವಲಸೆ ತಡೆಗಟ್ಟುವ ಮತ್ತು ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲೆಯ ಯಳಂದೂರು ತಾಲ್ಲೂಕಿನ ಹೊನ್ನೂರಿನಲ್ಲಿ ಸಾಮೂಹಿಕ ಬೇಸಾಯದ ಪ್ರಯೋಗವೊಂದು ನಡೆಯುತ್ತಿದೆ.

ಮೈಸೂರಿನ ನಿಸರ್ಗ ಟ್ರಸ್ಟ್‌, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಐದು ಎಕರೆ ಜಮೀನಿನಲ್ಲಿ ಒಂದೂವರೆ ತಿಂಗಳಿನಿಂದ ಸಾಮೂಹಿಕ ನೈಸರ್ಗಿಕ ಕೃಷಿ ನಡೆಯುತ್ತಿದೆ.

ಜಮೀನು ಇರುವ ಮತ್ತು ಇಲ್ಲದಿರುವ ಎಲ್ಲ ವರ್ಗಗಳ 15 ರೈತರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

ರೈತರು ಬೆಳೆದ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಜವಾಬ್ದಾರಿಯನ್ನು ನಿಸರ್ಗ ಟ್ರಸ್ಟ್‌ ವಹಿಸಿಕೊಂಡಿದೆ.

ಟ್ರಸ್ಟ್‌ನ ‘ನೈಸರ್ಗಿಕ ಸಾವಯವ–ರೈತ ಗ್ರಾಹಕರ ಒಕ್ಕೂಟ’ದ ಮೇಲ್ವಿಚಾರಣೆಯಲ್ಲಿ ಪ್ರಯೋಗ ನಡೆಯುತ್ತಿದೆ. ಇದಕ್ಕಾಗಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು‍ಪ್ರಕಾಶ್‌ ತಮ್ಮ ಐದು ಎಕರೆ ಜಮೀನನ್ನು ಭೋಗ್ಯಕ್ಕೆ ನೀಡಿದ್ದಾರೆ. 15 ರೈತರು ಬಂಡವಾಳ ಹಾಕಿ ಕೃಷಿ ಮಾಡುತ್ತಿದ್ದಾರೆ. ಖರ್ಚುವೆಚ್ಚಗಳನ್ನೆಲ್ಲ ಕಳೆದು ಬರುವ ದುಡ್ಡನ್ನು ಅವರೇ ಹಂಚಿಕೊಳ್ಳುತ್ತಾರೆ.

30ಕ್ಕೂ ಹೆಚ್ಚು ಬೆಳೆ: ಟೊಮೆಟೊ, ಮೂಲಂಗಿ, ಬೆಂಡೆಕಾಯಿ, ವಿವಿಧ ಸೊಪ್ಪು ಸೇರಿದಂತೆ 25ಕ್ಕೂ ಹೆಚ್ಚು ತರಕಾರಿಗಳು, ಬಾಳೆ, ಅರಿಸಿನ, ಕಬ್ಬು ಬೆಳೆಯಲಾ ಗುತ್ತಿದೆ. ಸೊಪ್ಪು ಈಗಾಗಲೇ ಕಟಾವಿಗೆ ಬಂದು, ಮೈಸೂರಿನ ಹಸಿರು ಸಂತೆಯಲ್ಲಿ ಮಾರಾಟವೂ ಆಗಿದೆ. ಬಹುಬೆಳೆ ಪದ್ಧತಿಗೆ ಒತ್ತು ನೀಡಲಾಗುತ್ತಿದೆ.

‘ರೈತರು ಕೃಷಿಯಿಂದ ವಿಮುಖರಾಗುತ್ತಿರುವ, ವಲಸೆ ಹೋಗುತ್ತಿರುವ‌ ಬಗ್ಗೆ ನಾವು ಮತ್ತು ನಿಸರ್ಗ ಟ್ರಸ್‌ ಪ್ರತಿನಿಧಿಗಳು ಚರ್ಚೆ ಮಾಡಿದೆವು. ಸುಸ್ಥಿರ ಕೃಷಿಯ ಪ್ರಯೋಗ ಮಾಡಲು ನಿರ್ಧರಿಸಿದೆವು. ನೈಸರ್ಗಿಕ ಕೃಷಿಯಲ್ಲಿ ತೊಡಗಿ, ಬೆಳೆದ ಉತ್ಪನ್ನಗಳನ್ನು ರೈತರೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು ನಮ್ಮ ಗುರಿ’ಎಂದು ಹೊನ್ನೂರು ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ದೇಶ ಹಲವು: ‘17 ವರ್ಷಗಳಿಂದ ನೈಸರ್ಗಿಕ ಕೃಷಿಯ ಪರವಾಗಿ ಟ್ರಸ್ಟ್‌ ಕಾರ್ಯನಿರ್ವಹಿಸುತ್ತಿದೆ. ಸಾಮೂಹಿಕ ಬೇಸಾಯ ಪ್ರಯೋಗದ ಹಿಂದೆ ಹಲವು ಉದ್ದೇಶಗಳಿವೆ. ನೈಸರ್ಗಿಕ ಕೃಷಿಯಲ್ಲಿ ತೊಡಗುವುದಕ್ಕೆ ರೈತರನ್ನು ಪ್ರೇರೇಪಿಸುವುದು,ಸಾವಯವ ಉತ್ಪನ್ನಗಳಿಗೆ ಮಧ್ಯವರ್ತಿಗಳಿಲ್ಲದ ಪ್ರತ್ಯೇಕ ಮಾರುಕಟ್ಟೆ ಸೃಷ್ಟಿಸುವುದು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಈ ಕಲ್ಪನೆ ಮೊಳಕೆಯೊಡೆದಿದೆ’ ಎಂದು ನಿಸರ್ಗ ಟ್ರಸ್ಟ್‌ ಅಧ್ಯಕ್ಷ ಬಸವರಾಜು ಕುಕ್ಕರಹಳ್ಳಿ ಹೇಳಿದರು.

ಸಾಮೂಹಿಕ ಹೈನುಗಾರಿಕೆ

ಇದೇ ತಂಡ ಹೊನ್ನೂರಿನಲ್ಲಿ ಸಾಮೂಹಿಕ ಹೈನುಗಾರಿಕೆ ಯೋಜನೆಯನ್ನೂ ಅನುಷ್ಠಾನಕ್ಕೆ ತರುತ್ತಿದೆ. 15 ರೈತರು ಒಟ್ಟುಗೂಡಿ ದೇಸಿ ತಳಿಯ ಹಸುಗಳನ್ನು ಸಾಕಿ, ಹಾಲು ಮಾರಾಟ ಮಾಡುವುದು ಯೋಜನೆ ಉದ್ದೇಶ. ಈಗಾಗಲೇ ರೈತರನ್ನು ಸಂಘಟಿಸಲಾಗಿದ್ದು, ಹಸು ಖರೀದಿಗೆ ಸಾಲವನ್ನೂ ಪಡೆಯಲಾಗಿದೆ.

ಮಳೆ ನೀರು ಸಂಗ್ರಹ ವ್ಯವಸ್ಥೆ

ಐದು ಎಕರೆ ಜಮೀನನ್ನು 36 ಅಡಿ ಅಳತೆಗೆ ತಕ್ಕಂತೆ ವಿಭಾಗಿಸಲಾಗಿದೆ. ಇವುಗಳ ಮಧ್ಯೆ 2 ಅಡಿ ಅಗಲ ಮತ್ತು 2 ಅಡಿ ಆಳದ ಅಗಳು (ಟ್ರೆಂಚ್‌) ನಿರ್ಮಿಸಲಾಗಿದೆ. ಜಮೀನಿಗೆ ಬಿದ್ದ ನೀರನ್ನು ಸಂಪೂರ್ಣವಾಗಿ ಈ ಅಗಳು ಹಿಡಿದಿಟ್ಟುಕೊಳ್ಳಲಿದೆ.

‘ವಿಷಮುಕ್ತವಾದ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವುದರ ಜೊತೆಗೆ, ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ’ ಎಂದು ಹೊನ್ನೂರು ಪ್ರಕಾಶ್‌ ಹೇಳಿದರು.

***

ಇದು ಒಂದು ಮಾದರಿಯಷ್ಟೇ. ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದು ಹೆಜ್ಜೆ ಇರಿಸಿದ್ದೇವೆ.

- ಬಸವರಾಜು ಕುಕ್ಕರಹಳ್ಳಿ, ನಿಸರ್ಗ ಟ್ರಸ್ಟ್‌ ಅಧ್ಯಕ್ಷ

ವಲಸೆ ಹೋಗಬಾರದು ಎಂಬ ದೃಷ್ಟಿಕೋನದಿಂದ ಸಾಮೂಹಿಕ ಬೇಸಾಯ ನಡೆಸುತ್ತಿದ್ದೇವೆ

- ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.